ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಎರಡು ಅತ್ಯುತ್ತಮ ಪಂದ್ಯಗಳು ಅಭಿಮಾನಿಗಳನ್ನು ಮನರಂಜಿಸಿದೆ. ಮೊದಲ ಪಂದ್ಯದಲ್ಲಿ ರಿಂಕೂ ಸಿಂಗ್ ಅಬ್ಬರದಿಂದಾಗಿ ಪವಾಡದ ರೀತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದರೆ ಎರಡನೇ ಪಂದ್ಯದಲ್ಲಿ ಶಿಖರ್ ಧವನ್ ಅವರ ಅಮೋಘ ಹೋರಾಟದ ಬಳಿಕವೂ ಪಂಜಾಬ್ ಕಿಂಗ್ಸ್ ತಂಡ ಸೋಲು ಕಾಣುವಂತಾಯಿತು. ಈ ಪಂದ್ಯದಲ್ಲಿ ಶಿಖರ್ ಧವನ್ ಪ್ರದರ್ಶಿಸಿದ ಅಮೋಘ ಪ್ರದರ್ಶನದ ಬಗ್ಗೆ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಮಾತನಾಡಿದ್ದು ಮೆಚ್ಚುಗೆ ಸೂಚಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಅಮೋಘ ಹೋರಾಟವನ್ನು ಪ್ರದರ್ಶಿಸಿದರು. ಆದರೆ ತಂಡದ ಇತರ ಆಟಗಾರರಿಂದ ಬೆಂಬಲ ವ್ಯಕ್ತವಾಗಲಿಲ್ಲ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಾಣುವಂತಾಯಿತು. ಶಿಖರ್ ಧವನ್ ಈ ಪಂದ್ಯದಲ್ಲಿ ಅಜೇಯ 99 ರನ್‌ಗಳಿಸಿ ಮಿಂಚಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ 144 ರನ್‌ಗಳ ಗುರಿಯನ್ನು ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿತು. ಆದರೆ ರಾಹುಲ್ ತ್ರಿಪಾಠಿ ಅವರ ಅಜೇಯ 74 ರನ್‌ಗಳ ಕೊಡುಗೆಯ ಕಾರಣದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿತು.

ಈ ಪಂದ್ಯದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಈ ಪಂದ್ಯದಲ್ಲಿ ಶಿಖರ್ ಧವನ್ ಅವರ 99 ರನ್‌ಗಳ ಬ್ಯಾಟಿಂಗ್ ಟಿ20 ಕ್ರಿಕೆಟ್‌ನಲ್ಲಿ ತಾನು ಕಂಡ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ ಎಂದು ಕೊಂಡಾಡಿದ್ದಾರೆ. ಈ ಪಂದ್ಯದಲ್ಲಿ ಸಾಧಿಸಿದ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯ ಗೌರವಕ್ಕೆ ಶಿಖರ್ ಧವನ್ ಅರ್ಹರು ಎಂದು ಕೊಂಡಾಡಿದ್ದಾರೆ.
ನಾನು ಶಿಖರ್ ಧವನ್ ಬಗ್ಗೆ ಮಾತನಾಡಿಬೇಕು. ನನ್ನ ಪ್ರಕಾರ ಇದು ನಾನು ಟಿ20 ಕ್ರಿಎಕಟ್‌ನಲ್ಲಿ ಕಂಡ ಅತ್ಯಂತ ಶ್ರೇಷ್ಠವಾದ ಇನ್ನಿಂಗ್ಸ್. ಅವರು ಸ್ಟ್ರೈಕನ್ನು ತಮ್ಮ ಬಳಿ ಇಟ್ಟುಕೊಂಡು ಪಂದ್ಯವನ್ನು ನಿಯಂತ್ರಿಸುತ್ತಾ ಈ ಅಲ್ಪ ಮೊತ್ತದ ಪಂದ್ಯದಲ್ಲಿಯೂ 99 ರನ್‌ಗಳಿಸಿದ್ದನ್ನು ಎಲ್ಲರೂ ಗೌರವಿಸಬೇಕು" ಎಂದು ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಬ್ರಿಯಾನ್ ಲಾರಾ ಹೇಳಿದ್ದಾರೆ.
ಆರಂಬಿಕನಾಗಿ ಕಣಕ್ಕಿಳಿದು ಶಿಖರ್ ಧವನ್ ಅಂತಿಮ ಹಂತದವರೆಗೂ ಹೋರಾಡಿದ ರೀತಿ ಅಮೋಘವಾಗಿತ್ತು. ಈ ಪಂದ್ಯದಲ್ಲಿ ಧವನ್ ಹೊರತುಪಡಿಸಿದರೆ ಸ್ಯಾಮ್ ಕರನ್ ಮಾತ್ರವೇ ಎರಡಂಕಿ ದಾಟಿದ ಮತ್ತೋರ್ವ ಆಟಗಾರ. ಸ್ಯಾಮ್ ಕರನ್ 22 ರನ್ ಬಾರಿಸಿದ್ದರು. ಉಳಿದ ಆಟಗಾರರ ಪೈಕಿ ಸಿಕಂದರ್ ರಾಜಾ ಅವರ 5 ರನ್ ಅತಿ ಹೆಚ್ಚಿನ ಮೊತ್ತವಾಗಿದೆ. ಒಂದು ಹಂತದಲ್ಲಿ 88 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಪಂಜಾಬ್ ಕಿಂಗ್ಸ್ ತಂಡ ಅತ್ಯಂತ ಸಂಕಷ್ಟದಲ್ಲಿತ್ತು.
ಆದರೆ ಅದಾದ ಬಳಿಕ ಸ್ಟ್ರೈಕನ್ನು ತನ್ನಲ್ಲಿಯೇ ಉಳಿಸಿಕೊಂಡು ತಂಡವನ್ನು ಗೌರವಯುತ ಮೊತ್ತದತ್ತ ಮುನ್ನಡೆಸಿದರು ಶಿಖರ್ ಧವನ್. ಶಿಖರ್ ಧವನ್ ಅವರ ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ತಂಡ 9 ವಿಕೆಟ್ ಕಳೆದುಕೊಂಡು 143 ರನ್‌ಗಳನ್ನು ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿದೆ.