ಮುಂದಿನ ವರ್ಷವೂ ಆಡಲಿದ್ದಾರಾ MS Dhoni?: ಸಿಎಸ್‌ಕೆ ಆಟಗಾರನ ಹೇಳಿಕೆಗೆ ಮಾಹಿ ಅಭಿಮಾನಿಗಳು ಹರ್ಷ!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ದಿಗ್ಗಜ ಆಟಗಾರ ಎಂಎಸ್ ಧೋನಿ ವೃತ್ತಿ ಜೀವನದ ಅಂಚಿನಲ್ಲಿದ್ದಾರೆ. ಹೀಗಾಗಿ 41ರ ಹರೆಯದ ಅನುಭವಿ ಆಟಗಾರ ಈ ಬಾರಿಯ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದು ನಿವೃತ್ತಿ ಘೋಷಿಸಲಿದ್ದಾರೆ ಎಂಬುದು ಬಹುತೇಕರ ಅಭಿಪ್ರಾಯ. ಆದರೆ ಧೋನಿ ನಿವೃತ್ತಿಯ ಬಗ್ಗೆ ಈವರೆಗೂ ತುಟಿ ಬಿಚ್ಚಿಲ್ಲ. ಅಲ್ಲದೆ ಸಿಎಸ್‌ಕೆ ಫ್ರಾಂಚೈಸಿಯಿಂದಲೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಧೋನಿ ನಿವೃತ್ತಿಯ ವಿಚಾರವಾಗಿ ಹಂಚಿಕೊಂಡಿರುವ ಅಭಿಪ್ರಾಯ ಕುತೂಹಲ ಮೂಡಿಸಿದೆ.
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಖಾಮುಖಿಯಾಗುವದಕ್ಕೂ ಮುನ್ನಸಿಎಸ್‌ಕೆ ಅನುಭವಿ ಆಟಗಾರ ಮೊಯೀನ್ ಅಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಂಎಸ್ ಧೋನಿ ಮುಂದಿನ ವರ್ಷದ ಐಪಿಎಲ್‌ನಲ್ಲಿಯೂ ಆಡುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಕುತೂಹಲ ಮೂಡಿಸಿದೆ.

ಧೋನಿ ಪ್ರದರ್ಶನದಿಂದ ಆಶ್ಚರ್ಯವಾಗಿಲ್ಲ
ಇಎಸ್‌ಪಿಎನ್ ಕ್ರಿಕ್ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಮೊಯೀನ್ ಅಲಿ ನೆಟ್ಸ್‌ನಲ್ಲಿ ಎಂಎಸ್ ಧೋನಿ ನಡೆಸುತ್ತಿರುವ ಅಭ್ಯಾಸವನ್ನು ಉಲ್ಲೇಖಿಸಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ಧೋನಿ ಚೆಂಡುಗಳನ್ನು ಬಾರಿಸುತ್ತಿರುವ ರೀತಿಯನ್ನು ನೋಡಿದಾಗ ಈ ಬಾರಿಯ ಐಪಿಎಲ್‌ನಲ್ಲಿ 41ರ ಹರೆಯಲ್ಲಿಯೂ ಧೋನಿ ಅದ್ಭುತವಾಗಿ ಪ್ರದರ್ಶನ ನೀಡುವುದು ಅಚ್ಚರಿ ಮೂಡಿಸುವುದಿಲ್ಲ ಎಂದಿದ್ದಾರೆ.
ಮುಂದಿನ ವರ್ಷವೂ ಆಡಬಹುದು
ಇನ್ನು ಇದೇ ಸಂದರ್ಭದಲ್ಲಿ ಮೊಯೀನ್ ಅಲಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಧೋನಿ ಆಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. "ಧೋನಿ ಖಂಡಿತವಾಗಿಯೂ ಮುಂದಿನ ವರ್ಷ ಆಡಬಹುದು. ಅವರು ಆಡುತ್ತಿರುವ ರೀತಿಯನ್ನು ನೋಡಿದಾಗ ಮುಂದಿನ ಎರಡ್ಮೂರು ವರ್ಷಗಳ ಕಾಲ ಆಡುವಷ್ಟು ಬ್ಯಾಟಿಂಗ್ ಸಾಮರ್ಥ್ಯ ಅವರಲ್ಲಿದೆ ಎಂದು ಭಾಸವಾಗುತ್ತದೆ"
ತಮ್ಮ ಜವಾಬ್ಧಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ
"ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡಿದ ರೀತಿಯನ್ನು ನೋಡಿದಾಗ ನನಗೆ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ನೆಟ್ಸ್‌ನಲ್ಲಿ ಅವರ ಬ್ಯಾಟಿಂಗ್ ನೋಡಿದ್ದೇನೆ. ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಈ ರೀತಿಯಾಗಿ ಆಡುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ ಅಷ್ಟು ಕೆಳ ಕ್ರಮಾಂಕದಲ್ಲಿ ಬಂದು ಆಡುವುದು ಸುಲಭವಲ್ಲ. ಆದರೆ ಅವರ ಜವಾಬ್ಧಾರಿಯನ್ನು ಧೋನಿ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ" ಎಂದಿದ್ದಾರೆ ಮೊಯೀನ್ ಅಲಿ.
ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಧೋನಿ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿನ ನೋವಿಗೆ ಒಳಗಾಗಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಅವರು ಕುಂಟುತ್ತಿರುವುದು ಕೂಡ ಕಂಡು ಬಂದಿತ್ತು. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿದ್ದು ಎಂಎಸ್ ಧೋನಿ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇಲ್ಲ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications