
ಮಾರ್ಚ್ ತಿಂಗಳ ಅಂತ್ಯದಲ್ಲಿ ಶುರುವಾದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಪ್ಲೇಆಫ್ ಹಂತದ ಪಂದ್ಯಗಳು ಆರಂಭಗೊಂಡಿವೆ. ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದ ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಯಶಸ್ವಿಯಾಗಿ ಪ್ಲೇಆಫ್ ತಲುಪಿವೆ.
ಇನ್ನು ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿದ್ದ ಕಾರಣದಿಂದಾಗಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಖಾಮುಖಿಯಾದವು. ಹೌದು, ನಿನ್ನೆ ( ಮೇ 23 ) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಮಹತ್ಚದ ಒಂದನೇ ಕ್ವಾಲಿಫಯರ್ ಪಂದ್ಯವನ್ನಾಡಿದವು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಮಣಿದು 20 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲ್‌ಔಟ್ ಆಗಿ 15 ರನ್‌ಗಳ ಅಂತರದ ಸೋಲನ್ನು ಅನುಭವಿಸಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಫೈನಲ್ ಪಂದ್ಯವನ್ನು ಆಡುವ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಹೌದು, 2016 ಹಾಗೂ 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಆಡದ ಚೆನ್ನೈ ಸೂಪರ್ ಕಿಂಗ್ಸ್ 14 ಇಂಡಿಯನ್ ಪ್ರೀಮಿಯರ್ ಟೂರ್ನಿಗಳನ್ನು ಆಡಿದ್ದು, ಈ ಪೈಕಿ ಒಟ್ಟು 12 ಬಾರಿ ಪ್ಲೇಆಫ್ ತಲುಪಿದ್ದು, 10 ಬಾರಿ ಫೈನಲ್ ಪ್ರವೇಶವನ್ನು ಮಾಡಿದೆ.
ಹಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿಯವರೆಗೂ ನಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಯಾವ ಆವೃತ್ತಿಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
* 2008ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
* 2009ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
* 2010ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2011ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2012ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2013ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2014ರ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತಿತ್ತು.
* 2015ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2018ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2019ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2020ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಏಳನೇ ಸ್ಥಾನ ಪಡೆದುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
* 2021ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2022ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನ ಪಡೆದುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
ಹೀಗೆ ಒಟ್ಟು 14 ಐಪಿಎಲ್ ಸೀಸನ್‌ಗಳಲ್ಲಿ ಕಣಕ್ಕಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ 12 ಬಾರಿ ಫೈನಲ್ ಪ್ರವೇಶಿಸಿ, ಹತ್ತು ಬಾರಿ ಫೈನಲ್ ಆಡಿ, 4 ಬಾರಿ ಚಾಂಪಿಯನ್ ಆಗಿದೆ.