
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಮೊದಲ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ತಮ್ಮ ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿ ಬೀಗಿದೆ. ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಮಾಡಿದ ಲೆಕ್ಕಾಚಾರಗಳು ಸರಿಯಾಗಿತ್ತು ಎಂಬುದನ್ನು ತಮ್ಮ ಫಲಿತಾಂಶದ ಮೂಲಕ ಗುಜರಾತ್ ಟೈಟನ್ಸ್ ಸಾಬೀತುಪಡಿಸಿದೆ. ಇದೀಗ ಮಿನಿ ಹರಾಜಿಗೆ ಗುಜರಾತ್ ಟೈಟನ್ಸ್ ತಂಡ ಸಜ್ಜಾಗಿದ್ದು ಆಟಗಾರರ ಬಿಡುಗಡೆ ಹಾಗೂ ರೀಟೈನ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಕಳೆದ ಆವೃತ್ತಿಯ ಆರಂಭಿಕ ಪಂದ್ಯದಿಂದಲೂ ಭರ್ಜರಿ ಯಶಸ್ಸು ಸಾಧಿಸಿತ್ತು. ಈ ಯಶಸ್ಸನ್ನು ಈ ಬಾರಿಯೂ ಮುಂದುವರಿಸುವ ದೃಷ್ಟಿಯಿಂದ ಎಚ್ಚರಿಕೆಯ ನಿರ್ಧಾರವನ್ನು ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ. ಆರು ಆಟಗಾರರನ್ನು ಗುಜರಾತ್ ಟೈಟನ್ಸ್ ತಂಡ ಬಿಡುಗಡೆಗೊಳಿಸಿದ್ದು ಇದರಲ್ಲಿ ನಾಲ್ವರು ವಿದೇಶಿ ಆಟಗಾರರಾಗಿದ್ದಾರೆ.
ಮೂವರು ವಿದೇಶಿ ಆಟಗಾರರನ್ನು ಗುಜರಾತ್ ಟೈಟನ್ಸ್ ತಂಡ ಕೆಕೆಆರ್ ಜೊತೆಗೆ ಟ್ರೇಡ್ ಮಾಡಿಕೊಂಡಿದೆ. ರಹಮಾನುಲ್ಲಾ ಗುರ್ಬಾಜ್, ಲೂಕಿ ಫರ್ಗುಸನ್ ಹಾಗೂ ಜೇಸನ್ ರಾಯ್ ಕೆಕೆಆರ್ ಜೊತೆಗೆ ಟ್ರೇಟ್ ಆದ ಆಟಗಾರರಾಗಿದ್ದಾರೆ. ವರುಣ್ ಅರೋನ್ ಮತ್ತು ಗುರ್‌ಕೀರತ್ ಸಿಂಗ್ ಹರಾಜಿಗೆ ಬಿಡುಗಡೆಯಾಗಿದ್ದಾರೆ.
ಗುಜರಾತ್ ಟೈಟನ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಶುಬ್ಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ರಶೀದ್ ಖಾನ್, ವಿಜಯ್ ಶಂಕರ್, ಆರ್ ಸಾಯಿ ಕಿಶೋರ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ನೂರ್ ಅಹ್ಮದ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್
ಬಿಡುಗಡೆಯಾದ ಆಟಗಾರರು: ರಹಮಾನುಲ್ಲಾ ಗುರ್ಬಾಜ್, ಲೂಕಿ ಫರ್ಗುಸನ್, ಡೊಮಿನಿಕ್ ಡ್ರೇಕ್ಸ್, ಗುರುಕೀರತ್ ಸಿಂಗ್, ಜೇಸನ್ ರಾಯ್, ವರುಣ್ ಆರೋನ್
ಮುಂದಿನ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗಾಗಿ ಗುಜರಾತ್ ಟೈಟನ್ಸ್ ತಂಡ 19.25 ಕೋಟಿ ಮೊತ್ತವನ್ನು ತನ್ನ ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಇನ್ನು ಮೂವರು ವಿದೇಶಿ ಆಟಗಾರರ ಸ್ಥಾನ ಖಾಲಿಯಿದೆ.