
ಕಳೆದ ಮಾರ್ಚ್ ತಿಂಗಳಾಂತ್ಯದಲ್ಲಿ ಶುರುವಾದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೀಗ ಮುಕ್ತಾಯದ ಸನಿಹಕ್ಕೆ ತಲುಪಿದೆ. ನಿನ್ನೆ ( ಮೇ 18 ) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿಯ 65 ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ.
ಈ ಪಂದ್ಯದ ಬಳಿಕ ಎಲ್ಲಾ ಹತ್ತು ತಂಡಗಳು ತಲಾ 13 ಪಂದ್ಯಗಳನ್ನು ಆಡಿ ಮುಗಿಸಿದ್ದು, ಕೇವಲ ಗುಜರಾತ್ ಟೈಟನ್ಸ್ ಮಾತ್ರ ಪ್ಲೇಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿದೆ. 18 ಅಂಕಗಳನ್ನು ಈಗಾಗಲೇ ಗುಜರಾತ್ ಟೈಟನ್ಸ್ ಪಡೆದುಕೊಂಡಿರುವ ಕಾರಣ ಲೀಗ್ ಹಂತ ಮುಗಿದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತವಾಗಿದ್ದು, ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಟೂರ್ನಿಯಿದ ಎಲಿಮಿನೇಟ್ ಆಗಿದ್ದು, ಸದ್ಯಕ್ಕೆ 12 ಅಂಕಗಳನ್ನು ಮಾತ್ರ ಪಡೆದುಕೊಂಡಿರುವ ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳೂ ಸಹ ಪ್ಲೇಆಫ್ ಪ್ರವೇಶಿಸುವುದಿಲ್ಲ ಎನ್ನಬಹುದು.
ಇನ್ನು ಪ್ಲೇಆಫ್‌ನಲ್ಲಿ ಉಳಿದಿರುವ ಕೊನೆಯ ಮೂರು ಸ್ಥಾನಗಳಿಗೆ ಅರ್ಹತೆ ಪಡೆದುಕೊಳ್ಳಲು ತಲಾ 15 ಅಂಕಗಳನ್ನು ಪಡೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮತ್ತು ತಲಾ 14 ಅಂಕಗಳನ್ನು ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಹೀಗೆ ಮೂರು ಸ್ಥಾನಗಳಿಗಾಗಿ ಈ ನಾಲ್ಕು ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಈ ನಾಲ್ಕೂ ತಂಡಗಳ ಪೈಕಿ ಆರ್‌ಸಿಬಿ ಹೊರತುಪಡಿಸಿ ಉಳಿದ ಎಲ್ಲಾ ಮೂರು ತಂಡಗಳೂ ಸಹ ಸೋತು ಪ್ಲೇಆಫ್‌ನಿಂದ ದೂರ ಉಳಿದಿರುವ ತಂಡಗಳ ವಿರುದ್ಧ ಲೀಗ್ ಹಂತದಲ್ಲಿನ ತಮ್ಮ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.
ಹೌದು, ನಾಳೆ ( ಮೇ 20 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬರೋಬ್ಬರಿ 213 ರನ್ ಬಾರಿಸಿ 15 ರನ್‌ಗಳ ಗೆಲುವು ಸಾಧಿಸಿತ್ತು ಹಾಗೂ ಪಂಜಾಬ್ ಪ್ಲೇಆಫ್ ಕನಸನ್ನೂ ಸಹ ಹಾಳು ಮಾಡಿತ್ತು.
ಹೀಗೆ ಪಂಜಾಬ್ ವಿರುದ್ಧ ಅಬ್ಬರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ವಿರುದ್ಧ ಗೆದ್ದರೆ ಸಿಎಸ್‌ಕೆ ಪ್ಲೇಆಫ್ ಅನುಮಾನ ಎಂದೇ ಹೇಳಬಹುದು. ಚೆನ್ನೈ ಈ ಪಂದ್ಯದಲ್ಲಿ ಸೋತು ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗೆದ್ದರೆ ಚೆನ್ನೈ ಟೂರ್ನಿಯಿಂದ ಹೊರಬೀಳಲಿದೆ.
ಇನ್ನು ಮುಂಬೈ ಇಂಡಿಯನ್ಸ್ ಸಹ ಟೂರ್ನಿಯಿಂದ ಹೊರಬಿದ್ದಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 21ರಂದು ಸೆಣಸಾಡಲಿದೆ. 14 ಅಂಕಗಳನ್ನು ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ತಲುಪಲಿದ್ದು, ಒಂದುವೇಳೆ ಸೋತರೆ ಪ್ಲೇಆಫ್ ಅರ್ಹತೆಯನ್ನು ಬಹುತೇಕವಾಗಿ ಕಳೆದುಕೊಳ್ಳಲಿದೆ.
ಇನ್ನುಳಿದಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹ ಟೂರ್ನಿಯಿಂದ ದೂರ ಉಳಿದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದ್ದು, ಈ ಪಂದ್ಯದಲ್ಲಿ ಸೋತು ತನ್ನ ಜತೆ ಪ್ಲೇಆಫ್ ಪೈಪೋಟಿಗೆ ಇಳಿದಿರುವ ತಂಡಗಳು ಗೆದ್ದರೆ ಲಕ್ನೋ ಸಹ ಕೈಸುಟ್ಟುಕೊಳ್ಳಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನಯ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಈ ಪಂದ್ಯದಲ್ಲಿ ಕಡ್ಡಾಯವಾಗಿ ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸಲಿದೆ.