ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6ನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದೆ. ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸದ್ದ ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಪ್ರದರ್ಶನ ನೀಡಿಕೊಂಡು ಬಂದಿತ್ತು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕಾರಣ ಗೆಲುವು ಸಾಧ್ಯವಾಗಿದೆ. ಆದರೆ ಈ ಗೆಲುವು ಕೂಡ ಡಿಸಿ ಪಾಲಿಗೆ ಸುಲಭವಾಗಿ ದಕ್ಕಲಿಲ್ಲ ಎಂಬುದು ಗಮನಾರ್ಹ ಅಂಶ.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 127 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಅಲ್ಪ ಮೊತ್ತದ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ ಎಂದು ಎಲ್ಲರೂ ಊಹಿಸಿದ್ದರು. ಅದಕ್ಕೆ ಪೂರಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪೋಟಕ ಆರಂಭವನ್ನು ಕೂಡ ಪಡೆದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್‌ಗೆ ಮತ್ತೊಂದು ತುದಿಯಲ್ಲಿ ಅಗತ್ಯ ನೆರವು ದೊರೆಯಲೇ ಇಲ್ಲ.

ಡೇವಿಡ್ ವಾರ್ನರ್ ಆರಂಭದಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರೂ ಕೂಡ ಮತ್ತೊಂದು ತುದಿಯಲ್ಲಿ ಡಿಸಿ ದಾಂಡಿಗರು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದರು. ಹೀಗಾಗಿ ಮತ್ತೆ ಎಚ್ಚರಿಕೆಯ ಆಟಕ್ಕೆ ವಾರ್ನರ್ ಮುಂದಾದರು. ಪೃಥ್ವಿ ಶಾ, ಮಿಚೆಲ್ ಮಾರ್ಶ್, ಫಿಲಿಪ್ ಸಾಲ್ಟ್ ಭಾರೀ ವೈಫಲ್ಯ ಅನುಭವಿಸಿದರು. ವಾರ್ನರ್ ಕೂಡ 57 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಮನೀಶ್ ಪಾಂಡೆ 21 ರನ್‌ಗಳ ಕೊಡುಗೆ ನೀಡಿ ಔಟಾದರು.
ಇನ್ನು ಕೊನೆಯ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಅಕ್ಷರ್ ಪಟೇಲ್ ಹಾಗು ಲಲಿತ್ ಯಾದವ್ ಕೆಕೆಆರ್ ಬೌಲರ್‌ಗಳ ದಾಳಿಯನ್ನು ಎದುರಿಸಲು ಪರದಾಡಿದರು. ಗೆಲುವಿನ ಗುರಿ ಸನಿಹದಲ್ಲಿದ್ದರೂ ರನ್‌ಗಳನ್ನು ಗಳಿಸುವುದು ಕಷ್ಟಕರವಾಗಿತ್ತು. ಸಾಕಷ್ಟು ನಾಟಕೀಯ ಕ್ಷಣಗಳ ಬಳಿಕ ಅಂತಿಮವಾಗಿ ಕೊನೆಯ ಓವರ್‌ನಲ್ಲಿ ನಾಲ್ಕು ಎಸೆಯಗಳು ಬಾಕಿಯಿರುವಂತೆಯೇ ಡಿಸಿ ಗೆಲುವು ಸಾಧಿಸಿತು. ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ ವಾರ್ನರ್ ಪಡೆ.
ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಮೊದಲ ಗೆಲುವಿನ ವಿಶ್ವಾಸ ಮೂಡಿಸಿತ್ತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಇಶಾಂತ್ ಶರ್ಮಾ, ಅನ್ರಿಕ್ ನಾರ್ಕಿಯಾ, ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆಯವು ಮೂಲಕ ಕೆಕೆಆರ್ ತಂಡಕ್ಕೆ ಆಘಾತ ನೀಡಿದರು. ಹೀಗಾಗಿ ನಿತೀಶ್ ರಾಣಾ ಪಡೆ ಹಿನ್ನಡೆ ಅನುಭವಿಸಿತು
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್
ಬೆಂಚ್: ಪೃಥ್ವಿ ಶಾ, ಯಶ್ ಧುಲ್, ಸರ್ಫರಾಜ್ ಖಾನ್, ರಿಪಾಲ್ ಪಟೇಲ್, ಚೇತನ್ ಸಕರಿಯಾ, ಪ್ರವೀಣ್ ದುಬೆ, ರಿಲೀ ರೊಸೊವ್, ರೋವ್‌ಮನ್ ಪೊವೆಲ್, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಕಮಲೇಶ್ ನಾಗರಕೋಟಿ, ವಿಕ್ಕಿ ಓಸ್ತ್ವಾಲ್, ಮುಸ್ತಾಫಿಜುರ್ ರೆಹಮಾನ್, ಅಭಿಷೇಕ್ ಪೊರೆಲ್
ಕೊಲ್ಕತ್ತಾ ನೈಟ್ ರೈಡರ್ಸ್: ಜೇಸನ್ ರಾಯ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಮನ್ದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಕುಲ್ವಂತ್ ಖೇಜ್ರೋಲಿಯಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಬೆಂಚ್: ಸುಯಶ್ ಶರ್ಮಾ, ಅನುಕೂಲ್ ರಾಯ್, ವೈಭವ್ ಅರೋರಾ, ಎನ್ ಜಗದೀಸನ್, ಡೇವಿಡ್ ವೈಸ್, ರಹಮಾನುಲ್ಲಾ ಗುರ್ಬಾಜ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಹರ್ಷಿತ್ ರಾಣಾ, ಆರ್ಯ ದೇಸಾಯಿ