
ನಿನ್ನೆ ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವುದರ ಮೂಲಕ ಐದನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಟೂರ್ನಿಗೆ ತೆರೆ ಬಿದ್ದಿದೆ.
ಮೊನ್ನೆಯೇ ಮುಕ್ತಾಯಗೊಳ್ಳಬೇಕಿದ್ದ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದ ಕಾರಣ ನಿನ್ನೆಗೆ ಮುಂದೂಡಲ್ಪಟ್ಟಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡು ಎರಡನೇ ಇನ್ನಿಂಗ್ಸ್ ಆರಂಭಗೊಳ್ಳುತ್ತಿದ್ದಂತೆ ಮತ್ತೆ ಮಳೆ ಸುರಿಯಲಾರಂಭಿಸಿತು. ಮಳೆಯ ಹೊಡೆತಕ್ಕೆ ಪಂದ್ಯ ಐದು ಓವರ್ ಕಡಿತಗೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
ಆದರೆ ಮಳೆಯ ಕಾರಣದಿಂದಾಗಿ 15 ಓವರ್‌ಗಳಿಗೆ ಪಂದ್ಯ ಕುಸಿದು ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ಕಂಡಿತು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎಂಬ ದಾಖಲೆಯನ್ನು ಮುಂಬೈ ಇಂಡಿಯನ್ಸ್ ತಂಡದ ಜತೆ ಹಂಚಿಕೊಂಡಿದ್ದು, ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಕ್ಕೆ 20 ಕೋಟಿ ರೂಪಾಯಿ ಬಹುಮಾನ ಧನವನ್ನು ಗೆದ್ದಿದೆ.
ಇನ್ನು ಟೂರ್ನಿ ಮುಕ್ತಾಯಗೊಂಡ ಬೆನ್ನಲ್ಲೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿ ನೀಡಲಾಗಿದ್ದು, ಈ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಹಾಗೂ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿಗೆ 'ಬೆಸ್ಟ್ ಪಿಚ್ & ಗ್ರೌಂಡ್' ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯ ಜತೆಗೆ 50 ಲಕ್ಷ ಬಹುಮಾನ ಸಹ ಈ ಕ್ರೀಡಾಂಗಣಗಳಿಗೆ ಲಭಿಸಿದೆ.
ಟೂರ್ನಿಯಲ್ಲಿ ಯಾವೆಲ್ಲಾ ಆಟಗಾರರು ಯಾವ ಸಾಧನೆಗೆ ಯಾವ ಪ್ರಶಸ್ತಿಗಳು ಹಾಗೂ ಎಷ್ಟು ಬಹುಮಾನ ಧನ ಪಡೆದರು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ಶುಬ್‌ಮನ್ ಗಿಲ್ 10 ಲಕ್ಷ ರೂಪಾಯಿ ಬಹುಮಾನ ಧನ ಪಡೆದರು.
* ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದ ಮೊಹಮ್ಮದ್ ಶಮಿ 10 ಲಕ್ಷ ರೂಪಾಯಿ ಬಹುಮಾನ ಧನ ಪಡೆದರು.
* ಗುಜರಾತ್ ಟೈಟನ್ಸ್ ತಂಡದ ರಶೀದ್ ಖಾನ್ 'ಕ್ಯಾಚ್ ಆಫ್ ದ ಸೀಸನ್' ಪ್ರಶಸ್ತಿ ಪಡೆದು 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟೂರ್ನಿಯಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಕ್ಕಾಗಿ 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.
* ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಎನಿಸಿಕೊಂಡ ಶುಬ್‌ಮನ್ ಗಿಲ್ 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.
* ಈ ಬಾರಿಯ ಐಪಿಎಲ್ ಟೂರ್ನಿಯ ಸೂಪರ್ ಸ್ಟ್ರೈಕರ್ ಎನಿಸಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್ 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.
* ಗೇಮ್ ಚೇಂಜರ್ ಆಫ್ ದ ಸೀಸಸ್ ಪ್ರಶಸ್ತಿ ಗೆದ್ದ ಶುಬ್‌ಮನ್ ಗಿಲ್ 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.
* ಈ ಬಾರಿಯ ಎಮರ್ಜಿಂಗ್ ಪ್ಲೇಯರ್ ಎನಿಸಿಕೊಂಡ ಯಶಸ್ವಿ ಜೈಸ್ವಾಲ್ 10 ಲಕ್ಷ ರೂಪಾಯಿ ಬಹುಮಾನ ಧನ ಗೆದ್ದರು.