
ಇಂದು ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತ್ಯಗೊಳ್ಳುತ್ತಿದೆ.
ಎಲ್ಲಾ ಯೋಜನೆಯಂತೆ ನಡೆದಿದ್ದರೆ ನಿನ್ನೆಯೇ ( ಮೇ 28 ) ಈ ಪಂದ್ಯ ನಡೆಯಬೇಕಿತ್ತು. ಆದರೆ ನಿನ್ನೆ ವಿಪರೀತ ಮಳೆ ಬಂದ ಕಾರಣ ಪಂದ್ಯ ರದ್ದಾಗಿ ಇಂದಿನ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಅದರಂತೆ ಇಂದು ಮಳೆಯ ಅಡ್ಡಿಯಿಲ್ಲದೇ ಪಂದ್ಯ ಆರಂಭವಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಗುಜರಾತ್ ಟೈಟನ್ಸ್ ತನ್ನ ಇನ್ನಿಂಗ್ಸ್ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕಠಿಣ ಸವಾಲನ್ನು ನೀಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೇ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ 3 ಎಸೆತಗಳಲ್ಲಿ 4 ರನ್ ಕಲೆಹಾಕಿದ್ದು, ಪಂದ್ಯ ಮಳೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 10.45ರ ಸಮಯಕ್ಕೆ ಪಿಚ್ ತಪಾಸಣೆ ನಡೆದಿದ್ದು, ಇದೀಗ ಮತ್ತೊಮ್ಮೆ 11.30ಕ್ಕೆ ಪಿಚ್ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಪಿಚ್ ತೇವಾಂಶ ಹೆಚ್ಚಾಗಿದ್ದು, ಸರಿಪಡಿಸಲು ಗ್ರೌಂಡ್‌ಮೆನ್ ಹರಸಾಸಹ ಪಡುತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿದೆ. ಗುಜರಾತ್ ಟೈಟನ್ಸ್ ತಂಡದ ಪರ ಶುಬ್‌ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಮೊದಲು ಬ್ಯಾಟಿಂಗ್ ಮಾಡಿದರು. ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 54 ರನ್ ಗಳಿಸಿದರೆ, ಶುಬ್‌ಮನ್ ಗಿಲ್ 20 ಎಸೆತಗಳಲ್ಲಿ 39 ರನ್ ಗಳಿಸಿದರು.
ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಕಲೆಹಾಕಿ ಅಬ್ಬರಿಸಿ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 21 ರನ್ ಗಳಿಸಿದರೆ, ರಶೀದ್ ಖಾನ್ ಡಕ್ಔಟ್ ಆದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೀಶ ಪತಿರಾಣ ಎರಡು ವಿಕೆಟ್ ಪಡೆದರೆ, ದೀಪಕ್ ಚಹಾರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಡಿವಾನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದಿದ್ದಾರೆ. ಮೊಹಮ್ಮದ್ ಶಮಿ ಮೊದಲ ಓವರ್ ಬೌಲಿಂಗ್ ಮಾಡಿದ್ದು 3 ಎಸೆತಗಳನ್ನು ಮಾತ್ರ ಎಸೆದಿದ್ದಾರೆ. ರುತುರಾಜ್ ಗಾಯಕ್ವಾಡ್ 3 ಎಸೆತಗಳಲ್ಲಿ 4 ರನ್ ಕಲೆಹಾಕಿ ಅಜೇಯರಾಗಿ ಉಳಿದುಕೊಂಡಿದ್ದಾರೆ.