ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ಕೆಲವೇ ಗಂಟೆಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಚಾಂಪಿಯನ್ ಯಾರು ಎಂಬುದು ಅಧಿಕೃತವಾಗಲಿದೆ. ಈ ಮೂಲಕ ಎರಡು ತಿಂಗಳ ಸುದೀರ್ಘ ಕ್ರಿಕೆಟ್ ಟೂರ್ನಿ ಅಂತ್ಯಗೊಳ್ಳಲಿದೆ. ಇನ್ನು ಈ ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆ ಎಂಬುದು ಎಲ್ಲರಿಗೂ ಇರುವ ಸಹಜ ಕುತೂಹಲ.
ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದೆ. ಚಾಂಪಿಯನ್ ಪಟ್ಟಕ್ಕೇರುವ ಅರ್ಹತೆಯನ್ನು ಎರಡು ತಂಡಗಳು ಕೂಡ ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಟ್ರೋಫಿ ಗೆಲ್ಲಲು ಬೇಕಿರುವ ಇಂದಿನ ಪಂದ್ಯದಲ್ಲಿ ಇತ್ತಂಡಗಳ ಆಟಗಾರರು ಕೂಡ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ಈ ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲ ನಾಲ್ವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..

ಋತುರಾಜ್ ಗಾಯಕ್ವಾಡ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರ ಪೈಕಿ ಗಾಯಕ್ವಾಡ್ ಕೂಡ ಒಬ್ಬರು. ಗುಜರಾತ್ ಟೈಟನ್ಸ್ ವಿರುದ್ಧ ನಡದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗಾಯಕ್ವಾಡ್ 44 ಎಸೆತಗಳಲ್ಲಿ 60 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಸಿಎಸ್‌ಕೆ ಪರವಾಗಿ ಗಾಯಕ್ವಾಡ್ ಅತಿ ಹೆಚ್ಚಿನ ರನ್ ಬಾರಿಸಿದ್ದ ಆಟಗಾರನಾಗಿದ್ದರು. ಈ ಯುವ ಆಟಗಾರ ಸದ್ಯ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಈ ಬಾರಿ 15 ಪಂದ್ಯಗಳನ್ನಾಡಿರುವ ಋತು 43.38ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದು 146.87ರ ಸ್ಟ್ರೈಕ್‌ರೇಟ್‌ನಲ್ಲಿ 564 ರನ್‌ಗಳನ್ನು ಗಳಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲಿಯೂ ಋತು ಮಿಂಚುವ ಸಾಧ್ಯತೆಯಿದೆ.
ಡೆವೋನ್ ಕಾನ್ವೆ
ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂದರೆ ಅದು ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ. ಕಾನ್ವೆ 15 ಪಂದ್ಯಗಳನ್ನು ಆಡಿದ್ದು 625 ರನ್‌ಗಳನ್ನು ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಮೂರು ಪಂದ್ಯಗಳನ್ನು ಆಡಿರುವ ಕಾನ್ವೆ 46ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಶುಬ್ಮನ್ ಗಿಲ್
ಸದ್ಯ ಶುಬ್ಮನ್ ಗಿಲ್ ಹೊಂದಿರುವ ಫಾರ್ಮ್‌ಗೆ ಅವರನ್ನು ಕಟ್ಟಿ ಹಾಕುವುದು ಅಸಾಧ್ಯ. ಅಮೋಫ ಪ್ರದರ್ಶನ ನೀಡುತ್ತಿರುವ ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳನ್ನು ಸಿಡಿಸಿರುವುದು ಅವರ ಅತ್ಯುನ್ನತ ಫಾರ್ಮ್‌ಗೆ ಸಾಕ್ಷಿಯಾಗಿದೆ. ಕೇವಲ ರನ್‌ಗಳಿಸುವುದು ಮಾತ್ರವಲ್ಲದೆ ಸ್ಟ್ರೈಕ್‌ರೇಟ್ ಕೂಡ ಹೆಚ್ಚಿಸಿಕೊಳ್ಳುವುದರಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗಿಲ್ ಕೇವಲ 60 ಎಸೆತಗಳಲ್ಲಿ 129 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಫೈನಲ್ ಪಂದ್ಯದಲ್ಲಿಯೂ ಗಿಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಡೇವಿಡ್ ಮಿಲ್ಲರ್
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈನಟ್ಸ್ ತಂಡದ ಯಶಸ್ಸಿಗೆ ಪ್ರಮುಖ ಪಾತ್ರವಹಿಸುವ ಸಾಮರ್ಥ್ಯಹೊಂದಿದ್ದಾರೆ ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್. ಗಿಲ್ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡರೆ ಆ ಜವಾಬ್ಧಾರಿಯನ್ನು ಡೇವಿಡ್ ಮಿಲ್ಲರ್ ವಹಿಸಿಕೊಳ್ಳುವ ಅಗತ್ಯವಿದೆ. ಸಿಎಸ್‌ಕೆ ವಿರುದ್ಧ ನಡೆದ ಕ್ವಾಲಿಫಯರ್ ಪಂದ್ಯದಲ್ಲಿ ಮಿಲ್ಲರ್ ವಿಫಲವಾಗಿದ್ದರು. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಮಿಲ್ಲರ್ ಪರಿಣಾಮಕಾರಿ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ.