ಸೋಮವಾರ, ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಕಲೆ ಹಾಕಿತು.
ಗುಜರಾತ್ ಟೈಟನ್ಸ್ ತಂಡದ ಪರ 21 ವರ್ಷದ ಬ್ಯಾಟರ್ ಸಾಯಿ ಸುದರ್ಶನ್ 96 ರನ್ ಗಳಿಸುವ ಮೂಲಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳನ್ನು ಚಚ್ಚಿದರು.

ಐಪಿಎಲ್ ಪಂದ್ಯಾವಳಿಯಲ್ಲಿ ಸಾಯಿ ಸುದರ್ಶನ್ ಅವರ ನಾಲ್ಕನೇ ಅರ್ಧಶತಕವಾಗಿದ್ದು, ಅವರಲ್ಲಿ ಮೂರು ಈ ವರ್ಷ ಬಂದಿವೆ. ಐಪಿಎಲ್ 2022ರ ಹರಾಜಿನಲ್ಲಿ ತಮಿಳುನಾಡು ಮೂಲದ ಈ ಯುವ ಆಟಗಾರನನ್ನು 20 ಲಕ್ಷ ರೂ.ಗೆ ಗುಜರಾತ್ ಟೈಟನ್ಸ್ ಖರೀದಿಸಿತು.
ಸಾಯಿ ಸುದರ್ಶನ್ ಅವರ ತಂದೆ ರಾಷ್ಟ್ರಮಟ್ಟದ ಅಥ್ಲೀಟ್ ಆಗಿದ್ದು, 1993ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೆ ಸಾಯಿ ಸುದರ್ಶನ್ ತಾಯಿ ಕೂಡ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು.
ಯುವ ಬ್ಯಾಟರ್ ಸಾಯಿ ಸುದರ್ಶನ್ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು 2019-20ರ ಪಲಯಂಪಟ್ಟಿ ಶೀಲ್ಡ್‌ನಲ್ಲಿ ಆಳ್ವಾರ್‌ಪೇಟೆ ಸಿಸಿಗಾಗಿ 635 ರನ್ ಗಳಿಸಿದ ನಂತರ ಬೆಳಕಿಗೆ ಬಂದರು.
2021ರಲ್ಲಿ ಸಾಯಿ ಸುದರ್ಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ತಂಡಕ್ಕಾಗಿ ತಮ್ಮ ಟಿ20 ಚೊಚ್ಚಲ ಪಂದ್ಯವನ್ನು ಆಡಿದರು. ಎಡಗೈ ಬ್ಯಾಟರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನು ಆಡಿದರು.
ಈ ವೇಳೆ ಸಾಯಿ ಸುದರ್ಶನ್ ರಾಜ್ಯ ಮಟ್ಟದ ತಂಡದಲ್ಲಿ ತಮ್ಮ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಸ್ಥಿರ ಪ್ರದರ್ಶನದಿಂದ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.
ಸಾಯಿ ಸುದರ್ಶನ್ ಅವರು 8 ಇನ್ನಿಂಗ್ಸ್‌ಗಳಿಂದ 143.77 ಸ್ಟ್ರೈಕ್‌ರೇಟ್‌ನೊಂದಿಗೆ 358 ರನ್ ಗಳಿಸಿದರು. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಲೈಕಾ ಕೋವಲ್ ಕಿಂಗ್ಸ್ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
2022ರಲ್ಲಿ ಸಾಯಿ ಸುದರ್ಶನ್ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಆಯ್ಕೆಯಾದರು. ಇದೇ ವೇಳೆ ಪಂಜಾಬ್ ಕಿಂಗ್ಸ್ ವಿರುದ್ಧ ಚೊಚ್ಚಲ ಪಂದ್ಯವಾಡುವ ಮೂಲಕ ಐಪಿಎಲ್ ಪ್ರವೇಶ ಮಾಡಿದರು. ಸಾಯಿ ಸುದರ್ಶನ್ 5 ಪಂದ್ಯಗಳಿಂದ ಒಂದು ಅರ್ಧಶತಕದೊಂದಿಗೆ 165 ರನ್ ಗಳಿಸಿದ್ದರು.