
ಮಾರ್ಚ್ 31ರಿಂದ ಅದ್ಧೂರಿಯಾಗಿ ಆರಂಭಗೊಳ್ಳುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ದಿನಗಣನೆ ಆರಂಭವಾಗಿದ್ದು, ಟಿ20 ಕ್ರಿಕೆಟ್ ಲೀಗ್ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಅಭಿಮಾನಿಗಳು ಕಾತರರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಚೊಚ್ಚಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಸಹ ನಡೆಯಲಿದ್ದು, ಪುರುಷರ ಲೀಗ್‌ಗಿಂತ ಮುನ್ನ ಅಂದರೆ, ಮಾರ್ಚ್ 4ರಿಂದ ಮಹಿಳಾ ಕ್ರಿಕೆಟ್ ಲೀಗ್ ಪ್ರಾರಂಭವಾಗಲಿದೆ. ಇದರಲ್ಲಿಯೂ ಆರ್‌ಸಿಬಿಯ ಮಹಿಳಾ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಇದೇ ವೇಳೆ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂಗೆ ಭೇಟಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಪುರುಷ ಮತ್ತು ಮಹಿಳಾ ಆಟಗಾರರೊಂದಿಗೆ ಸಂವಾದ ನಡೆಸಿದರು.

ಓಲಾಫ್ ಸ್ಕೋಲ್ಜ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಪುರುಷ ಮತ್ತು ಮಹಿಳಾ ತಂಡದ ಸದಸ್ಯರೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಕ್ರಿಕೆಟ್ ಭಾರತದ ಮೊದಲ ಉತ್ಸಾಹ ಎಂದು ಜರ್ಮನಿ ಚಾನ್ಸೆಲರ್ ಅರ್ಥಮಾಡಿಕೊಂಡಿದ್ದಾರೆ ಎಂದು ಜರ್ಮನ್ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಜರ್ಮನಿಯಲ್ಲಿ ಕ್ರಿಕೆಟ್ ಅಷ್ಟೊಂದು ಜನಪ್ರಿಯವಾಗಿಲ್ಲ. ಜರ್ಮನಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಅಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಆದ್ದರಿಂದ, ಓಲಾಫ್ ಸ್ಕೋಲ್ಜ್ ಅವರು ಭಾರತಕ್ಕೆ ಕ್ರಿಕೆಟ್ ಎಂದರೆ ಏನು ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಲು ಬಯಸಿದ್ದರು," ಎಂದು ಜರ್ಮನಿ ರಾಯಭಾರ ಅಧಿಕಾರಿ ಹೇಳಿದ್ದಾರೆ.
"ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಬೆಂಗಳೂರಿಗೆ ಸ್ವಾಗತಿಸಲಾಯಿತು. ಓಲಾಫ್ ಸ್ಕೋಲ್ಜ್ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ದೆಹಲಿಗೆ ಭೇಟಿ ನೀಡಿದಾಗ ಜರ್ಮನಿ ಚಾನ್ಸೆಲರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು," ಎಂದು ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.