ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಶುಕ್ರವಾರ ಮೊದಲ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದ್ದು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಡುವ ತಂಡ ಯಾವುದು ಎಂಬುದು ಖಚಿತವಾಗಲಿದೆ. ಈ ಪಂದ್ಯ ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.
ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ತಂಡ 15 ರನ್‌ಗಳ ಅಂತರದಿಂದ ಸೋಲು ಅನುಭವಿಸುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. ಇದೀಗ ಮತ್ತೊಂದುಯ ಅವಕಾಶ ಪಡೆದುಕೊಂಡಿರುವ ಜಿಟಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಡಲಿದೆ. ಶುಕ್ರವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಸಲಿದೆ.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣೆಸಾಡಿತ್ತು. ಈ ಪಂದ್ಯದಲ್ಲಿ ಅಮೋಘ 81 ರನ್‌ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ಗೆದ್ದು ಆತ್ಮವಿಶ್ವಾಸದೊಂದಿಗೆ ಕ್ವಾಲಿಫಯರ್ ಪಂದ್ಯವನ್ನಾಡಲು ಸಜ್ಜಾಗಿದೆ. ತಂಡದ ಬಹುತೇಕ ಆಟಗಾರರು ಲಯದಲ್ಲಿದ್ದು ಬೌಲಿಂಗ್‌ನಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದ ಬಲ ಹೆಚ್ಚಿದಂತೆ ಭಾಸವಾಗುತ್ತಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧದ ಈ ಕ್ವಾಲಿಫಯರ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಮೇ 26ರಂದು ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್ ಪಿಚ್ ರಿಪೋರ್ಟ್
ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯ ಮತ್ತೊಂದು ಹೈಸ್ಕೋರಿಂಗ್ ಪಂದ್ಯವಾಗುವುದರಲ್ಲಿ ಅನುಮಾನವಿಲ್ಲ. ಅಹ್ಮದಾಬಾದ್‌ನ ಈ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ಅನುಕೂಲ ನೀಡಲಿದ್ದು ಬೌಲರ್‌ಗಳು ದಂಡನೆಗೆ ಒಳಗಾಗುವುದು ಖಚಿತ. ಆರಂಬದಲ್ಲಿ ವೇಗಗಳಿಗೆ ಸ್ವಿಂಗ್ ಮೂಲಕ ನೆರವು ನೀಡುವ ಸಾಧ್ಯತೆಯಿದೆ. ಅಂತಿಮ ಹಂತದಲ್ಲಿ ಸ್ಪಿನ್ನರ್‌ಗಳು ಇಲ್ಲಿ ಮಿಂಚುವ ಅವಕಾಶವಿದೆ.
ಹವಾಮಾನ ವರದಿ
ಶುಕ್ರವಾರ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯಲು ಪೂರಕವಾದ ವಾತಾವರಣವನ್ನು ಹೊಂದಿದೆ. ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ನಿಂದ 41 ಡಿಗ್ರಿಯವರೆಗೂ ಇರುವ ಸಾಧ್ಯತೆಯಿದೆ.
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟನ್ಸ್: ಶುಬ್ಮನ್ ಗಿಲ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತುವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮತ್ತು ನೂರ್ ಅಹ್ಮದ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಪಿಯುಷ್ ಚಾವ್ಲಾ, ಕ್ರಿಸ್ ಜೋರ್ಡಾನ್, ಜೇಸನ್ ಬೆಹ್ರೆಂಡೋರ್ಫ್ ಮತ್ತು ಆಕಾಶ್ ಮಧ್ವಲ್.