ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಪಂದ್ಯಗಳು ನಡೆಯುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮಂಗಳವಾರ ನಡೆದ ಕ್ವಾಲಿಫಯರ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ ತಂಡವನ್ನು 15 ರನ್‌ಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ. ಈ ಪಂದ್ಯದ ಬಳಿಕ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದು ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಯುವ ಆಟಗಾರ ಶುಬ್ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭವಿಷ್ಯದ ಆಟಗಾರ ಎಂದು ಕೊಂಡಾಡಿದ್ದಾರೆ. ಅಲ್ಲದೆ ಭಾರತ ತಂಡದ ನಾಯಕನಾಗುವ ಸಾಮರ್ಥ್ಯ ಶುಬ್ಮನ್ ಗಿಲ್ ಅವರಲ್ಲಿ ಇದೆ. ಸಾಕಷ್ಟು ಪ್ರತಿಭಾನ್ವಿತ ಆಟಗಾರರ ಪಡೆಯೇ ಇರುವ ಕಾರಣ ಭಾರತ ತಂಡದ ಭವಿಷ್ಯ ಅದ್ಭುತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಯಶಸ್ವಿ ಜೈಸ್ವಾಲ್ ಬಗ್ಗೆಯೂ ಮಾತನಾಡಿದ್ದು 2023ರ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಭರವಸೆಯ ಆಟಗಾರ ಎಂದಿದ್ದು ಆತನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯವಿದೆ ಎಂದಿದ್ದಾರೆ. ಈ ಮೂಲಕ ಶುಬ್ಮನ್ ಗಿಲ್ ಜೊತೆಗೆ ಯಶಸ್ವಿ ಜೈಸ್ವಾಲ್ ಬಗ್ಗೆಯೂ ಹರ್ಭಜನ್ ಸಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ಭಾರತದ ಭವಿಷ್ಯದ ಬ್ಯಾಟರ್‌ಗಳ ಬಗ್ಗೆ ಮಾತನಾಡುವುದಾದರೆ ಶುಬ್ಮನ್ ಗಿಲ್‌ಗೆ ಆ ಸಾಮರ್ಥ್ಯವಿದೆ. ಅವರಲ್ಲದೆ ಯಶಸ್ವಿ ಜೈಸ್ವಾಲ್ ಕೂಡ ಭಾರತದ ಭವಿಷ್ಯದ ಆಟಗಾರನಾಗುವ ಸಾಮರ್ಥ್ಯಹೊಂದಿದ್ದಾರೆ. ಈ ವರ್ಷ ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಶುಬ್ಮನ್ ಗಿಲ್ ಭಾರತ ತಂಡದ ಭವಿಷ್ಯದ ನಾಯಕನಾಗುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಭಾರತದ ಅನ್‌ಕ್ಯಾಪ್‌ಡ್ ಆಟಗಾರರು ಅದ್ಬುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಜಿತೇಶ್ ಸಿಂಗ್, ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ಅವರಿಂದ ಅಮೋಘ ಬ್ಯಾಟಿಂಗ್ ವ್ಯಕ್ತವಾಗಿದೆ. ಇದು ಭಾರತೀಯ ಕ್ರಿಕೆಟ್‌ನ ದೃಷ್ಟಿಯಿಂದ ಸಾಕಷ್ಟು ಸಕಾರಾತ್ಮಕ ಸಂಗತಿ ಎಂಬುದು ನಿಜ.
ಇನ್ನು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯ ವಹಿಸಿಕೊಳ್ಳಬೇಕು ಎಂದಿದ್ದು ಯುವ ಆಟಗಾರರ ತಾಜಾ ತಂಡವನ್ನು ಕಟ್ಟಬೇಕಿದೆ ಎಂದಿದ್ದಾರೆ. "ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಬೇಕು. ಯಶಸ್ವಿ ಜೈಸ್ವಾಲ್ ಹಾಗೂ ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಬೇಕು. ಅವರೊಂದಿಗೆ ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ತಿಲಕ್ ವರ್ಮಾ ಮತ್ತು ನಿತೀಶ್ ರಾಣಾ ಅವರಂತಾ ಆಟಗಾರರ ತಂಡ ಸಾಕಷ್ಟು ಅದ್ಭುತ ಸಾಮರ್ಥ್ಯವನ್ನು ಹೊಂದಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.