
ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿನ್ನೆ ( ಮೇ 29 ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ.
ಮೊನ್ನೆ ನಡೆಯಬೇಕಿದ್ದ ಈ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡು ನಿನ್ನೆ ನಡೆದಿದ್ದು ನಿನ್ನೆಯೂ ಸಹ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಮುಗಿದ ಬಳಿಕ ಮಳೆಯಾದ ಕಾರಣ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಎರಡನೇ ಇನ್ನಿಂಗ್ಸ್ ಅನ್ನು 15 ಓವರ್‌ಗಳಿಗೆ ಇಳಿಸಿ ಐದು ಓವರ್ ಕಡಿತಗೊಳಿಸಲಾಯಿತು ಹಾಗೂ ಗುರಿಯನ್ನೂ ಸಹ ಇಳಿಸಲಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಮಳೆಯ ಕಾರಣದಿಂದಾಗಿ 15 ಓವರ್‌ಗಳಿಗೆ ಪಂದ್ಯ ಕುಸಿದು ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ಕಂಡಿತು.
ಅಂತಿಮವಾಗಿ ಎರಡು ಎಸೆತಗಳಲ್ಲಿ ಚೆನ್ನೈ ತಂಡಕ್ಕೆ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ ಮೋಹಿತ್ ಶರ್ಮಾ ಎಸೆದ ಎಸೆತಗಳಿಗೆ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚಾಂಪಿಯನ್ ಆಗುವಂತೆ ಮಾಡಿದರು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹತ್ತನೇ ಐಪಿಎಲ್ ಫೈನಲ್ ಆಡಿ ಐದನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡಿದ್ದು, ಎಷ್ಟು ಬಹುಮಾನ ಧನವನ್ನು ಸಂಪಾದಿಸಿದೆ ಹಾಗೂ ರನ್ನರ್ ಅಪ್ ಆದ ಚೆನ್ನೈ ಸೂಪರ್ ಕಿಂಗ್ಸ್ ಎಷ್ಟು ಹಣವನ್ನು ಸಂಪಾದಿಸಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ 20 ಕೋಟಿ ರೂಪಾಯಿಗಳ ಬಹುಮಾನ ಧನ ಹಾಗೂ ಐಪಿಎಲ್ ಟ್ರೋಫಿಯನ್ನು ಪಡೆದುಕೊಂಡಿದೆ.
* ರನ್ನರ್ ಅಪ್ ಆದ ಗುಜರಾತ್ ಟೈಟನ್ಸ್ 12.5 ಕೋಟಿ ರೂಪಾಯಿಗಳ ಬಹುಮಾನ ಧನ ಪಡೆದಿದೆ.
* ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಜಿಂಕ್ಯಾ ರಹಾನೆ ಫೈನಲ್ ಪಂದ್ಯದ ಸ್ಟ್ರೈಕರ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದು ಒಂದು ಲಕ್ಷ ಬಹುಮಾನ ಧನ ಪಡೆದುಕೊಂಡರು.
* ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಗೇಮ್ ಚೇಂಜರ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿ ಒಂದು ಲಕ್ಷ ಪಡೆದರು.
* ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಮೋಸ್ಟ್ ವ್ಯಾಲುಯೆಬಲ್ ಅಸೆಟ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದು ಒಂದು ಲಕ್ಷ ಪಡೆದರು.
* ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಆನ್ ದ ಗೋ ಫೋರ್ಸ್ ಆಫ್ ದ ಫೈನಲ್ ಪ್ರಶಸ್ತಿ ಪಡೆದು ಒಂದು ಲಕ್ಷ ಗಳಿಸಿದರು.
* ಪಂದ್ಯದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಸಾಯಿ ಸುದರ್ಶನ್ ಲಾಂಗೆಸ್ಟ್ ಸಿಕ್ಸರ್ ಆಫ್ ದ ಮ್ಯಾಚ್ ಪ್ರಶಸ್ತಿಗಾಗಿ ಒಂದು ಲಕ್ಷ ಪಡೆದರು.
* ಕ್ಯಾಚ್ ಆಫ್ ದ ಮ್ಯಾಚ್ ಎನಿಸಿಕೊಂಡ ಎಂಎಸ್ ಧೋನಿ ಒಂದು ಲಕ್ಷ ಪಡೆದರು
* ಪ್ಲೇಯರ್ ಆಫ್ ದ ಮ್ಯಾಚ್ ಎನಿಸಿಕೊಂಡ ಡಿವಾನ್ ಕಾನ್ವೆ ಐದು ಲಕ್ಷ ಪಡೆದರು.