
ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮೀಪಿಸುತ್ತಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಧೂರಿ ಚಾಲನೆ ಸಿಗಲಿದೆ.
ಐಪಿಎಲ್ ಸೀಸನ್ 16ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡುವ ಮೂಲಕ ಚಾಲನೆ ನೀಡಲಿವೆ.
ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆದರೆ, ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಒಂದರ ನಂತರ ಒಂದು ಆಘಾತ ಎದುರಿಸುತ್ತಿದೆ.
ಆಲ್‌ರೌಂಡರ್ ವಿಲ್ ಜಾಕ್ಸ್ ಐಪಿಎಲ್‌ನಿಂದ ಹೊರಬಿದ್ದಾಗ ಮೊದಲ ಆಘಾತ ಎದುರಿಸಿತ್ತು. ಇದೀಗ ಮತ್ತೊಬ್ಬ ಸ್ಟಾರ್ ಬೌಲರ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಝಲ್‌ವುಡ್ ಕಾಲಿನ ಗಾಯದಿಂದ ಬಳಲುತ್ತಿದ್ದು, ಇತ್ತೀಚಿಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದರು.
2023ರ ಜೂನ್‌ನಲ್ಲಿ ನಡೆಯಲಿರುವ ಆಶಸ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಪರಿಪೂರ್ಣವಾಗಿ ಫಿಟ್ ಆಗಿರಲು 2023ರ ಐಪಿಎಲ್ ಪಂದ್ಯಾವಳಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಝಲ್‌ವುಡ್ ಆಧಾರಸ್ತಂಭವಾಗಿದ್ದಾರೆ. ಅಲ್ಲದೇ, ಅವರು ನಂಬರ್ ಒನ್ ಶ್ರೇಯಾಂಕದ ಟಿ20 ಬೌಲರ್ ಕೂಡ ಹೌದು.
ಜೋಶ್ ಹ್ಯಾಝಲ್‌ವುಡ್ ಅವರ ಅನುಪಸ್ಥಿತಿಯು 2023ರಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆರ್‌ಸಿಬಿ ಕನಸಿಗೆ ದೊಡ್ಡ ಹೊಡೆತ ಬೀಳಲಿದೆ. ಜೋಶ್ ಹ್ಯಾಝಲ್‌ವುಡ್ ಐಪಿಎಲ್ ಟೂರ್ನಿಯನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಬಗ್ಗೆ ಸ್ವತಃ ಜೋಶ್ ಹ್ಯಾಝಲ್‌ವುಡ್ ಅಥವಾ ಆರ್‌ಸಿಬಿ ಆಡಳಿತ ಮಂಡಳಿ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ.

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಐಪಿಎಲ್‌ನಲ್ಲಿ ಜೋಶ್ ಹ್ಯಾಝಲ್‌ವುಡ್ ಆಡುವ ಕುರಿತು ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ಜೋಶ್ ಹ್ಯಾಝಲ್‌ವುಡ್ ಬದಲು ವೇಯ್ನ್ ಪಾರ್ನೆಲ್?
2023ರ ಐಪಿಎಲ್‌ನಿಂದ ಜೋಶ್ ಹ್ಯಾಜಲ್‌ವುಡ್ ಹೊರಗುಳಿದರೆ, ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್ ಪಾರ್ನೆಲ್ ಆಯ್ಕೆಯಾಗಬಹುದು ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಆಲ್‌ರೌಂಡರ್ ವೇಯ್ನ್ ಪಾರ್ನೆಲ್ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವೇಯ್ನ್ ಪಾರ್ನೆಲ್ ಇತ್ತೀಚೆಗೆ ಮುಕ್ತಾಯಗೊಂಡ SA20 ಲೀಗ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು ಮತ್ತು ಕಳೆದ ಎರಡು ವರ್ಷಗಳಿಂದ ಗಮನಾರ್ಹವಾಗಿ ಸುಧಾರಿಸಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ಐಪಿಎಲ್ 2023ರ ಹರಾಜಿನಲ್ಲಿ ವೇಯ್ನ್ ಪಾರ್ನೆಲ್ ಅವರ ಹೆಸರನ್ನು ನಾಲ್ಕು ಬಾರಿ ಹರಾಜಿನಲ್ಲಿ ತಂದರೂ ಮಾರಾಟವಾಗದೆ ಉಳಿದರು.
ಇನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಎದುರು ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಐಪಿಎಲ್ 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಮೈಕಲ್ ಬ್ರೆಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.