IPL 2023: ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ; 5ನೇ ಟ್ರೋಫಿ ಗೆದ್ದ ಬಳಿಕ ಧೋನಿ ಭಾವುಕ!

ನಿನ್ನೆ ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ.
ಮೇ 28 ನಡೆಯಬೇಕಿದ್ದ ಈ ಪಂದ್ಯ ವಿಪರೀತ ಮಳೆ ಬಂದ ಕಾರಣ ರದ್ದಾಗಿ ನಿನ್ನೆಯ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಆದರೆ ಈ ರಿಸರ್ವ್ ಡೇ ದಿನದಂದೂ ಸಹ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿತ್ತು. ವಿಪರೀತ ಮಳೆ ಬಂದ ಕಾರಣ 20 ಓವರ್‌ಗಳ ಪಂದ್ಯ 15 ಓವರ್‌ಗೆ ಕುಸಿತ ಕಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಮಳೆಯ ಕಾರಣದಿಂದಾಗಿ 15 ಓವರ್‌ಗಳಿಗೆ ಪಂದ್ಯ ಕುಸಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು.
ಇನ್ನು ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿದ್ದು 5 ವಿಕೆಟ್‌ಗಳ ಗೆಲುವನ್ನು ಕಂಡಿತು. ಅಂತಿಮವಾಗಿ ಎರಡು ಎಸೆತಗಳಲ್ಲಿ 10 ರನ್ ಬೇಕಿದ್ದಾಗ ಸಿಕ್ಸರ್ ಹಾಗೂ ಬೌಂಡರಿ ಚಚ್ಚಿದ ರವೀಂದ್ರ ಜಡೇಜಾ ಸೋಲುವ ಹಂತದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.
ಇನ್ನು ಪಂದ್ಯದಲ್ಲಿ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ನಾಯಕ ಎಂ ಎಸ್ ಧೋನಿ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನೆಚ್ಚಿನ ಕ್ರಿಕೆಟಿಗನ ಅಂತಿಮ ಐಪಿಎಲ್ ಟೂರ್ನಿ ಎಂಬ ಭಾವನೆಯಿಂದ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಅಪಾರ ಅಭಿಮಾನಿಗಳು ನಿರಾಸೆಗೊಳಗಾದರು.
ಹೀಗೆ ಬ್ಯಾಟ್ ಮೂಲಕ ನಿರಾಸೆ ಮೂಡಿಸಿದ ಎಂ ಎಸ್ ಧೋನಿ ಪಂದ್ಯ ಮುಗಿದ ಬಳಿಕ ಮನಬಿಚ್ಚಿ ಮಾತನಾಡಿದರು. ನಿವೃತ್ತಿ ಕುರಿತ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಉತ್ತರವೊಂದಕ್ಕಾಗಿ ಕಾಯುತ್ತಿದ್ದೀರ ಎಂದು ಮಾತನ್ನು ಆರಂಭಿಸಿದ ಎಂಎಸ್ ಧೋನಿ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಈ ವರ್ಷ ನಾನು ಪಡೆದ ಬೆಂಬಲ ಹಾಗೂ ಪ್ರೀತಿಯನ್ನು ನೋಡಿದರೆ ನನಗೆ ಹೇಳಲು ಇಷ್ಟ ಪಡುವ ಒಂದೇ ಮಾತೆಂದರೆ 'ತುಂಬಾ ಧನ್ಯವಾದಗಳು' ಎಂಬುದು. ಆದರೆ ಕಷ್ಟದ ಕೆಲಸವೇನೆಂದರೆ ಇನ್ನೂ 9 ತಿಂಗಳುಗಳ ಕಾಲ ಕಷ್ಟ ಪಟ್ಟು ಮುಂದಿನ ಐಪಿಎಲ್ ಆಡುವುದು ಎಂದು ಧೋನಿ ಹೇಳಿದರು.
ಹೀಗೆ ಮತ್ತೊಂದು ಐಪಿಎಲ್ ಸೀಸನ್ ಆಡುವ ಮನಸ್ಸಿದೆ ಎಂಬುದನ್ನು ತಿಳಿಸಿದ ಎಂ ಎಸ್ ಧೋನಿ ಎಲ್ಲವೂ ನನ್ನ ದೇಹದ ಮೇಲೆ ಅವಲಂಬಿತವಾಗಿದೆ. ಇದನ್ನು ನಿರ್ಧರಿಸಲು ನನಗೆ ಇನ್ನೂ ಆರೇಳು ತಿಂಗಳುಗಳ ಸಮಯವಿದೆ. ಇದು ನನ್ನ ಕಡೆಯಿಂದ ನೀಡಬಹುದಾದ ಉಡುಗೊರೆ ಎಂದು ಭಾವಿಸುತ್ತೇನೆ. ನನಗೆ ಕಷ್ಟ ಆದರೂ ಅದೊಂದು ಉಡುಗೊರೆ. ಅವರು ಪ್ರೀತಿಯನ್ನು ತೋರಿದ ವಿಧಾನಕ್ಕೆ ನಾನು ಏನಾದರೂ ಉಡುಗೊರೆ ನೀಡಬೇಕಾಗಿದೆ ಎಂದರು. ಅಲ್ಲದೇ ಮೊದಲ ಪಂದ್ಯವನ್ನಾಡಲು ಕಣಕ್ಕೆ ಇಳಿದಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದದ್ದನ್ನು ಕಂಡು ಕಣ್ಣು ತುಂಬಿ ಬಂದಿತ್ತು. ಆಗ ಡಗ್ಔಟ್‌ನಲ್ಲಿ ನಿಂತು ನಾನು ಇದನ್ನು ಇನ್ನಷ್ಟು ಅನುಭವಿಸಬೇಕೆನಿಸಿತು. ಬಳಿಕ ಚೆನ್ನೈನಲ್ಲಿಯೂ ಸಹ ಇದೇ ರೀತಿಯ ಅನುಭವವಾಯಿತು ಎಂದು ಧೋನಿ ಭಾವುಕರಾಗಿ ಹೇಳಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications