IPL 2023: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಮ, ಇನ್ನೇನಿದ್ದರೂ ಐಪಿಎಲ್ ಹಂಗಾಮ; ಫ್ರಾಂಚೈಸಿ ಸೇರಲಿರುವ ಕ್ರಿಕೆಟಿಗರು

ಬುಧವಾರ, ಮಾರ್ಚ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡವು 21 ರನ್‌ಗಳ ಭರ್ಜರಿ ಗೆಲವು ಸಾಧಿಸಿತು.
ಈ ಮೂಲಕ ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 269 ರನ್ ಬೆನ್ನಟ್ಟಲು ವಿಫಲವಾದ ಭಾರತ ತಂಡವು ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಅನುಭವಿಸಿತು.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿರುವ ಭಾರತೀಯ ಆಟಗಾರರು ಮಾರ್ಚ್ 31ರಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಾವಳಿಗೆ ಸಿದ್ಧರಾಗಲಿದ್ದಾರೆ. ಫ್ರಾಂಚೈಸಿ ಶಿಬಿರಗಳನ್ನು ಸೇರುವ ಮೊದಲು ಮೂರರಿಂದ ನಾಲ್ಕು ದಿನಗಳ ಕಾಲ ಚಿಕ್ಕ ವಿರಾಮವನ್ನು ಪಡೆಯಲಿದ್ದಾರೆ.
ಭಾರತೀಯ ಆಟಗಾರರು ಮಾತ್ರವಲ್ಲದೇ ವಿಶ್ವದ ಕ್ರಿಕೆಟ್ ಆಡುವ ಮತ್ತು ಐಪಿಎಲ್ ತಂಡಗಳ ಭಾಗವಾಗಿರುವ ಬಹುತೇಕ ಆಟಗಾರರು ಐಪಿಎಲ್ ಶಿಬಿರವನ್ನು ಸೇರಲಿದ್ದಾರೆ. ಎರಡು ತಿಂಗಳುಗಳ ಕಾಲ ಬಹುತೇಕ ತಂಡಗಳ ಅಂತಾರಾಷ್ಟ್ರೀಯ ಪ್ರಮುಖ ಆಟಗಾರರು ತಮ್ಮ ತಂಡವನ್ನು ತೊರೆದು ಭಾರತಕ್ಕೆ ಬರಲಿದ್ದಾರೆ.

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ ಉದ್ಘಾಟನಾ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, 2023ರ ಏಕದಿನ ವಿಶ್ವಕಪ್ ತಂಡದ ಸಂಯೋಜನೆಯಲ್ಲಿರುವ ಪ್ರಮುಖ ಭಾರತೀಯ ಆಟಗಾರರು ಐಪಿಎಲ್ ಆಡುವ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ. ಆದ್ದರಿಂದ ಉಳಿದ ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಲು ಐಪಿಎಲ್‌ಗೆ ಕಾಯುತ್ತಿದ್ದಾರೆ.
"ಕೆಲವು ಆಟಗಾರರು ತಮ್ಮ ಐಪಿಎಲ್ ಶಿಬಿರಗಳಿಗೆ ನೇರವಾಗಿ ಸೇರಬಹುದು. ತಮ್ಮ ಐಪಿಎಲ್ ತಂಡಗಳನ್ನು ಕೂಡಿಕೊಳ್ಳುವ ಮೊದಲು ಮೂರರಿಂದ ನಾಲ್ಕು ದಿನಗಳ ಸಣ್ಣ ವಿರಾಮವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ," ಎಂದು ಬಿಸಿಸಿಐನ ಮೂಲಗಳು ಪಿಟಿಐಗೆ ತಿಳಿಸಿವೆ.
ಇನ್ನು ಬಿಸಿಸಿಐ ಮೂಲಗಳ ಪ್ರಕಾರ, ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಿದ್ಧರಾಗಿದ್ದಾರೆ. ಹಾಗಾಗಿ ಐಪಿಎಲ್‌ನಲ್ಲಿ ಅವರು ಭಾಗವಹಿಸುವುದಿಲ್ಲ.

ಈ ನಿರ್ಧಾರವನ್ನು ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುತ್ತಿದೆ. ಏಕೆಂದರೆ ಇದೀಗ ಶಸ್ತ್ರಚಿಕಿತ್ಸೆಯು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ಪುನರಾಗಮನ ಮಾಡುವ ಅವಕಾಶವನ್ನು ನೀಡುತ್ತದೆ.
ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಈಗಾಗಲೇ ಬೆನ್ನಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಇಬ್ಬರು ಆಟಗಾರರಾಗಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವು ಆಟಗಾರರಿಗೆ ಐಪಿಎಲ್‌ನಿಂದ ವಿಶ್ರಾಂತಿ?
ಆರ್‌ಸಿಬಿ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಕೆಲವು ಐಪಿಎಲ್ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಕಾರಣವೆನೆಂದರೆ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್.
ವಿಶ್ವಕಪ್ ತಂಡದ ಭಾಗವಾಗಲಿರುವ ಭಾರತೀಯ ಆಟಗಾರರಿಗೆ ಐಪಿಎಲ್‌ನಿಂದ ಹೆಚ್ಚಿನ ವಿಶ್ರಾಂತಿ ನೀಡಲಾಗುವುದು ಎಂದು ಹೇಳಿರುವ ಬಿಸಿಸಿಐ ಆದೇಶವೇ ಇದಕ್ಕೆ ಕಾರಣವಾಗಿದೆ.
ಐಪಿಎಲ್‌ನಿಂದ ವಿಶ್ರಾಂತಿ ಪಡೆಯುವವರಲ್ಲಿ ವಿರಾಟ್ ಕೊಹ್ಲಿ ಮಾತ್ರವಲ್ಲದೆ, ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಕೆಲವು ಪ್ರಮುಖ ಆಟಗಾರರು ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications