ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಮ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿದ್ದು ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ಟೂರ್ನಿಯಲ್ಲಿ ಬಹುತೇಕ ಪಾರುಪತ್ಯ ಸಾಧಿಸಿದ್ದು ಆಡಿದ 13 ಪಂದ್ಯಗಳ ಪೈಕಿ 9 ಗೆಲುವು ಸಾಧಿಸಿದರೆ 4 ಪಂದ್ಯಗಳಲ್ಲಿ ಸೋಲು ಕಂಡಿದೆ.
ಆದರೆ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದು ಈ ಟೂರ್ನಿಯಲ್ಲಿ ಪಾಂಡ್ಉ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ ಎಂದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಪಾಂಡ್ಯ ಬ್ಯಾಟ್‌ನಿಂದ ರನ್ ಹರಿದು ಬಾರದಿದ್ದರೆ ಮ್ಯಾನೇಜ್‌ಮೆಂಟ್‌ಗೆ ಇದು ಕಠಿಣ ಸವಾಲಾಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಎರಡನೇ ವಿಕೆಟ್‌ಗೆ ಭರ್ಜರಿ 147 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ಜೋಡಿ ಬೆರ್ಪಟ್ಟ ಬಳಿಕ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯ ಅದೇ ಲಯದಲ್ಲಿ ಪಂದ್ಯವನ್ನು ಮುಂದುವರಿಸಲು ವಿಫಲವಾದರು. ಉಳಿದ ದಾಂಡಿಗರಿಂದ ಕೂಡ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ.
"ಗುಜರಾತ್ ಟೈಟನ್ಸ್ ಮೂರನೇ ಕ್ರಮಾಂಕದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ನಾಯಕ ಹಾರ್ದಿಕ್ ಪಾಂಡ್ಯ ಈ ಬಾರಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರ ಬ್ಯಾಟ್‌ನಿಂದ ರನ್ ಸಿಡಿಯದಿದ್ದರೆ ಆ ಕ್ರಮಾಂಕದಲ್ಲಿ ಯಾವ ಆಟಗಾರನನ್ನು ಕಳುಹಿಸುವುದು ಎಂಬುದು ದೊಡ್ಡ ಸವಾಲಾಗಲಿದೆ" ಎಂದಿದ್ದಾರ ಇರ್ಪಾನ್ ಪಠಾಣ್.
ಜಿಟಿ ನಾಯಕ ಹಾರ್ದಿಕ್ ಪಾಂಡ್ಯ ಈ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಿಂದ 300 ರನ್ ಗಳಿಸಿದ್ದಾರೆ. ಗುಜರಾತ್ ಟೈಟನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ್ದಾಗ ಪಾಂಡ್ಯ 53 ಎಸೆತಗಳನ್ನು ಆಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿ ಸೋಲಿನ ಹೊಣೆಯನ್ನು ಸ್ವತಃ ಪಾಂಡ್ಯ ವಹಿಸಕೊಂಡಿದ್ದರು. ಆ ಪಂದ್ಯದಲ್ಲಿ 131 ರನ್‌ಗಳನ್ನು ಬೆನ್ನಟ್ಟುವಾಗ ಅಜೇಯ 59 ರನ್ ಗಳಿಸಿದರು ಹಾರ್ದಿಕ್ ಪಾಂಡ್ಯ.
ಆದರೆ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ಹೆಚ್ಚಿನ ಹಾನಿಯನ್ನು ಮಾಡಿಲ್ಲ. ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಹಾಘೂ ಅಭಿನಮ್ ಮನೋಹರ್ ಅವರಂತಾ ಆಕ್ರಮಣಕಾರಿ ಆಟಗಾರರು ಸಂಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿರುವ ಕಾರಣ ತಂಡ ಮೇಲುಗೈ ಸಾಧಿಸುತ್ತಲೇ ಬಂದಿದೆ. ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಜಟಿ ತಂಡಕ್ಕೆ ಲೀಗ್ ಹಂತದಲ್ಲಿ ಒಂದು ಪಂದ್ಯ ಮಾತ್ರ ಬಾಕಿಯಿದ್ದು ಮುಂದಿನ ಭಾನುವಾರ ಆರ್‌ಸಿಬಿ ವಿರುದ್ಧ ಈ ಪಂದ್ಯವನ್ನಾಡಲಿದೆ. ಇದು ಲೀಗ್ ಹಂತದ ಕೊನೆಯ ಪಂದ್ಯವೂ ಹೌದು.