ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಭಾನುವಾರ ರಾತ್ರಿ ಕೂಡಿಕೊಂಡಿದ್ದಾರೆ. ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿದ್ದ ಲಿಟನ್ ದಾಸ್ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಕೆಕೆಆರ್ ಪಡೆಯನ್ನು ಸೇರಿಕೊಂಡಿರುವ ಬಾಂಗ್ಲಾ ಆಟಗಾರ ಮುಂದಿನ ಪಂದ್ಯದ ಆಯ್ಕೆಗೆ ಲಭ್ಯವಿದ್ದಾರೆ. ಕೆಕೆಆರ್ ತಂಡವನ್ನು ಸೇರಿಕೊಂಡ ಬಳಿಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರು ಲಿಟನ್ ದಾಸ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದ ಆಟಗಾರ ಲಿಟನ್ ದಾಸ್ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಕೊಂಡಿದ್ದು ಹರಾಜಿನಲ್ಲಿ ಕೆಕೆಆರ್ ತಂಡದ ಪಾಲಾಗಿದ್ದರು. ಲಿಟನ್ ದಾಸ್ ಅವರಿಗೆ ಇದು ಐಪಿಎಲ್‌ನಲ್ಲಿ ದೊರೆತ ಪ್ರಥಮ ಅವಕಾಶವಾಗಿದೆ.

ಇನ್ನು ಐಪಿಎಲ್‌ನಲ್ಲಿ ಭಾಗವಹಿಸಲು ಕೊಲ್ಕತ್ತಾಗೆ ಪ್ರಯಾಣಿಸುವುದಕ್ಕೂ ಮುನ್ನ ಲಿಟನ್ ದಾಸ್ ಢಾಕಾದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು "ನನಗೆ ಆಡಲು ಅವಕಾಶ ದೊರೆಯುತ್ತದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ನಾನು ಆಡುತ್ತೇನೆಯೇ ಇಲ್ಲವೇ ಎಂಬುದು ಖಚಿತವಿಲ್ಲ. ಇದೊಂದು ಕಲಿಯಲು ಉತ್ತಮವಾದ ಅವಕಾಶ. ನಾನು ಎಷ್ಟು ದಿನ ಅಲ್ಲಿ ಇರುತ್ತೇನೆಯೋ ಅಷ್ಟು ದಿನ ಅಲ್ಲಿನ ಅಂಗಳದ ಬಗ್ಗೆ ಜ್ಞಾನ ಪಡೆಯುವ ಪ್ರಯತ್ನ ಮಾಡುತ್ತೇನೆ. ಅದು ನಮಗೆ ಭವಿಷ್ಯದಲ್ಲಿ ಸಹಕಾರಿಯಾಗಬಹುದು" ಎಂದಿದ್ದಾರೆ ಲಿಟನ್ ದಾಸ್.
ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಶಕೀಬ್ ಅಲ್ ಹಸನ್ ಅವರನ್ನು ತಾನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ ಲಿಟನ್ ದಾಸ. ಶಕೀಬ್ ಅಲ್ ಹಸನ್ ಕೂಡ ಕೆಕೆಆರ್ ಪರವಾಘಿ ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಬೇಕಾಗಿತ್ತು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಶಕೀಬ್ ಈ ಬಾರಿಯ ಐಪಿಎಲ್ ಟೂರ್ನಿಯಿಮದ ಹಿಂದಕ್ಕೆ ಸರಿದಿದ್ದಾರೆ.
"ಖಂಡಿತವಾಗಿಯೂ ಅವರು ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ನಾವು ಜೊತೆಯಾಗಿ ಇರುತ್ತಿದ್ದೆವು ಹಾಗೂ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು. ಆದರೆ ಕೆಲ ಕಾರಣಗಳಿಂದಾಗಿ ಅವರಾಗಿಯೇ ಐಪಿಎಲ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಹಾಗಾಗಿ ಅವರನ್ನು ನಾನು ಮಿಸ್ ಮಾಡಿಕೊಳ್ಳಲಿದ್ದೇನೆ" ಎಂದಿದ್ದಾರೆ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್.
ಇನ್ನು ಭಾರತಕ್ಕೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಎರಡೂ ದೇಶಗಳ ಅಭಿಮಾನಿಗಳ ಬೆಂಬಲ ತನಗೆ ಬೇಕು ಎಂದಿದ್ದಾರೆ. "ಬೆಂಬಲಿಗರು ಯಾವಾಗಲೂ ನನ್ನ ಜೊತೆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಒಳ್ಳೆಯದು ನಡೆಯಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಇದ ನನ್ನ ಮೊದಲ ಐಪಿಎಲ್ ಹಾಗಾಗಿ ಖಂಡಿತವಾಗಿಯೂ ಬಹಳ ಸಂತಸವಿದೆ. ವೈಯಕ್ತಿಕವಾಗಿ ನಾನು ಯಾವುದೇ ಗುರಿಯನ್ನು ಇಟ್ಟುಕೊಂಡಿಲ್ಲ. ಅವಕಾಶ ಸಿಕ್ಕರೆ ನಾನು ಆಡಲಿದ್ದೇನೆ" ಎಂದಿದ್ದಾರೆ ಲಿಟನ್ ದಾಸ್.
ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್‌ದೀಪ್ ಸಿಂಗ್, ಜೇಸನ್ ರಾಯ್