
ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಕ್ರಿಕೆಟ್‌ನಿಂದ ವಿವಿಧ ಕಾರಣಗಳಿಂದಾಗಿ ದೂರಾಗಿದ್ದ ಹಲವು ಕ್ರಿಕೆಟಿಗರಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಲು ಇದು ಸರಿಯಾದ ವೇದಿಕೆಯಾಗಿದೆ. ಹೀಗಾಗಿ ಫಾರ್ಮ್ ಕಳೆದುಕೊಂಡಿರುವ ಹಾಗೂ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಆಟಗಾರರ ಪ್ರದರ್ಶನಗಳ ಮೇಲೆ ಕ್ರಿಕೆಟ್ ಪ್ರಿಯರು ಕಣ್ಣಿಟ್ಟಿದ್ದಾರೆ.
ಅದರಲ್ಲಿಯೂ ವಿಶೇಷವಾಗಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೌದು, ಸೂರ್ಯಕುಮಾರ್ ಯಾದವ್ ಕಳೆದ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದು, ಕೆಎಲ್ ರಾಹುಲ್ ಸಹ ಆಡಿದ ಕೆಲವೇ ಪಂದ್ಯಗಳಲ್ಲಿ ಸರಿಯಾದ ಪ್ರದರ್ಶನ ನೀಡದೇ ಮಂಕಾಗಿದ್ದರು. ಹೀಗಾಗಿ ಇವರಿಬ್ಬರೂ ಈ ಬಾರಿಯ ಐಪಿಎಲ್ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆ ಹಾಗೂ ಕುತೂಹಲ ಎದ್ದಿದೆ.
ಇನ್ನು ಸೂರ್ಯಕುಮಾರ್ ಯಾದವ್ ಒಂದೆರಡು ಇನ್ನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರೆ, ಕೆಎಲ್ ರಾಹುಲ್ ಮಾತ್ರ ಟಿ ಟ್ವೆಂಟಿ ಮಾದರಿಗೆ ತಕ್ಕಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ನೀರಸ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಆಮೆಗತಿ ವೇಗದ ಬ್ಯಾಟರ್ ಎಂಬ ಟ್ರೋಲ್‌ಗಳಿಗೆ ಕೆಎಲ್ ರಾಹುಲ್ ಒಳಗಾಗಿದ್ದಾರೆ.
ಕೆಎಲ್ ರಾಹುಲ್ ತಮ್ಮ ವೈಯಕ್ತಿಕ ರನ್ ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದ್ದು, ಇದು ನಿನ್ನೆ ( ಏಪ್ರಿಲ್ 23 ) ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಮತ್ತೊಮ್ಮೆ ಹೆಚ್ಚಾಗಿದೆ. ಹೌದು, ಈ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರಾಹುಲ್ 61 ಎಸೆತಗಳಲ್ಲಿ ಕೇವಲ 68 ರನ್ ಗಳಿಸಿದ್ದಾರೆ.
ಹೀಗೆ ಕಳಪೆ ಬ್ಯಾಟಿಂಗ್ ಮಾಡಿದ ಪರಿಣಾಮ ತನ್ನ ನಾಯಕತ್ವದ ತಂಡ ಲಕ್ನೋ ಸೂಪರ್ ಜೈಂಟ್ಸ್ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಆರಂಭದಿಂದ ಕೊನೆಯ ಓವರ್‌ವರೆಗೂ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 136 ರನ್‌ಗಳನ್ನು ಚೇಸ್ ಮಾಡುವಲ್ಲಿ ವಿಫಲವಾಗಿದ್ದು ಕೆಟ್ಟದಾಗಿ ಟ್ರೋಲ್‌ಗೆ ಒಳಗಾಗುವಂತೆ ಮಾಡಿದೆ. ಹೀಗೆ ಹೀನಾಯವಾಗಿ ಟ್ರೋಲ್ ಆದ ಪಂದ್ಯದಲ್ಲಿಯೇ ಕೆಎಲ್ ರಾಹುಲ್ ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ.
ಹೌದು, ಟಿ ಟ್ವೆಂಟಿ ಮಾದರಿಯಲ್ಲಿ ವೇಗವಾಗಿ 7000 ರನ್ ಬಾರಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ನಿರ್ಮಿಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆಯನ್ನು ಕೆಎಲ್ ರಾಹುಲ್ ಈ ಪಂದ್ಯದ ಮೂಲಕ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಲದೇ ಟಿ20 ಮಾದರಿಯಲ್ಲಿ ವೇಗವಾಗಿ 7000 ರನ್‌ಗಳನ್ನು ಪೂರೈಸಿದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆಯನ್ನೂ ಸಹ ಕೆಎಲ್ ರಾಹುಲ್ ಮಾಡಿದ್ದಾರೆ. ಈ ಕುರಿತಾಗ ಮಾಹಿತಿಗಳು ಈ ಕೆಳಕಂಡಂತಿದೆ..
ಅತಿ ವೇಗವಾಗಿ 7000 ಟಿ20 ರನ್ ಬಾರಿಸಿದ ವಿಶ್ವ ಕ್ರಿಕೆಟಿಗರು ( ಅಂತರರಾಷ್ಟ್ರೀಯ ಹಾಗೂ ಫ್ರಾಂಚೈಸಿ ಲೀಗ್‌ಗಳು ಸೇರಿದಂತೆ )
1. ಬಾಬರ್ ಅಜಮ್ - 187 ಇನ್ನಿಂಗ್ಸ್
2. ಕ್ರಿಸ್ ಗೇಲ್ - 192 ಇನ್ನಿಂಗ್ಸ್
3. ಕೆಎಲ್ ರಾಹುಲ್ - 197 ಇನ್ನಿಂಗ್ಸ್
4. ವಿರಾಟ್ ಕೊಹ್ಲಿ - 212 ಇನ್ನಿಂಗ್ಸ್
5. ಆರನ್ ಫಿಂಚ್ - 222 ಇನ್ನಿಂಗ್ಸ್
ಅತಿ ವೇಗವಾಗಿ 7000 ಟಿ20 ರನ್ ಬಾರಿಸಿದ ಭಾರತೀಯ ಕ್ರಿಕೆಟಿಗರು ( ಅಂತರರಾಷ್ಟ್ರೀಯ ಹಾಗೂ ಫ್ರಾಂಚೈಸಿ ಲೀಗ್‌ಗಳು ಸೇರಿದಂತೆ )
1. ಕೆಎಲ್ ರಾಹುಲ್ - 197 ಇನ್ನಿಂಗ್ಸ್
2. ವಿರಾಟ್ ಕೊಹ್ಲಿ - 212 ಇನ್ನಿಂಗ್ಸ್
3. ಶಿಖರ್ ಧವನ್ - 246 ಇನ್ನಿಂಗ್ಸ್
4. ಸುರೇಶ್ ರೈನಾ - 251 ಇನ್ನಿಂಗ್ಸ್
5. ರೋಹಿತ್ ಶರ್ಮಾ - 258 ಇನ್ನಿಂಗ್ಸ್