IPL 2023 RCB Vs CSK: ಕೊನೆಯ ಬಾರಿ ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯದಲ್ಲಿ ಗೆದ್ದಿದ್ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮಹತ್ವದ ಪಂದ್ಯ ಇಂದು (ಸೋಮವಾರ) ನಡೆಯಲಿದೆ. ಐಪಿಎಲ್‌ನ ಎರಡು ಜನಪ್ರಿಯ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖಾಮುಖಿಯಾಗಲಿವೆ. ಮೂರು ವರ್ಷದ ನಂತರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. 2019ರಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಎಸೆತದಲ್ಲಿ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.
ಆರ್‌ಸಿಬಿ ಸಿಎಸ್‌ಕೆ ನಡುವಿನ ಪಂದ್ಯ ಎಂದರೆ ಅಲ್ಲೊಂದು ರೋಚಕ ಹಣಾಹಣಿ ಇದ್ದೇ ಇರುತ್ತದೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿಯನ್ನು ಒಟ್ಟಿಗೆ ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಭಿಮಾನಿಗಳ ನಡುವೆ ಭಾರಿ ಪೈಪೋಟಿ ಇದ್ರು ಇವರಿಬ್ಬರದೂ ಮಾತ್ರ ಬಿಡಿಸಲಾಗದ ಸ್ನೇಹ. ಕೊಹ್ಲಿಯೇ ಧೋನಿಯನ್ನು ಹಲವು ಬಾರಿ ನೆನಪು ಮಾಡಿಕೊಂಡಿದ್ದಾರೆ, ಕಷ್ಟದಲ್ಲಿ ಜೊತೆಯಾಗಿದ್ದು ಧೋನಿ ಎಂದು ಹೇಳಿಕೊಂಡಿದ್ದಾರೆ.

ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 19 ಪಂದ್ಯಗಳಲ್ಲಿ ಗೆದ್ದರೆ, ಆರ್ ಸಿಬಿ 10 ಪಂದ್ಯಗಳಲ್ಲಿ ಪರಾಕ್ರಮ ತೋರಿದೆ, ಒಂದು ಪಂದ್ಯ ಮಾತ್ರ ಫಲಿತಾಂಶ ಇಲ್ಲದೆ ಕೊನೆಯಾಗಿದೆ. ಆದರೆ ಈಗ ಎರಡೂ ತಂಡಗಳಲ್ಲಿ ಭಾರಿ ಬದಲಾವಣೆ ಆಗಿದೆ, ಬದಲಾಗ್ದೇ ಇರೋದು ಅಂದ್ರೆ ಅದು ಧೋನಿ, ಕೊಹ್ಲಿ ಮತ್ತು ಅಭಿಮಾನಿಗಳು ಮಾತ್ರ. 2019ರಲ್ಲಿ ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿತ್ತು.

ಮೂರು ವರ್ಷಗಳ ಹಿಂದಿನ ರಣರೋಚಕ ಪಂದ್ಯ
ಏಪ್ರಿಲ್ 21, 2019ರಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಸಿಎಸ್‌ಕೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತ್ತು. ಆರಂಭಿಕ ಆಟಗಾರ ಪಾರ್ಥೀವ್ ಪಟೇಲ್ 37 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 53 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 9 ರನ್ ಗಳಿಸಿದ್ದರು.
ಎಬಿಡಿ 19 ಎಸೆತಗಳಲ್ಲಿ 25 ರನ್ ಗಳಿಸಿದರೆ, ಅಕ್ಷದೀಪ್ ನಾಥ್ 24, ಮಾರ್ಕಸ್ ಸ್ಟೊಯಿನಿಸ್ 14, ಮೊಯೀನ್ ಅಲಿ 26 ರನ್ ಗಳಿಸಿದ್ದರು. ಪವನ್ ನೇಗಿ 5 ರನ್ ಗಳಿಸಿದ್ದರು. ದೀಪಕ್ ಚಾಹರ್ 4 ಓವರ್ ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದಿದ್ದರು, ಜಡೇಜಾ, ಬ್ರಾವೋ ಕೂಡ ತಲಾ ಎರಡು ವಿಕೆಟ್ ಪಡೆದಿದ್ದರು. ಇಮ್ರಾನ್ ತಾಹಿರ್ 1 ರನ್ ಪಡೆದಿದ್ದರು.

ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿ ಗೆದ್ದಿದ್ದ ಆರ್‌ಸಿಬಿ
ಸವಾಲಿನ ಮೊತ್ತವನ್ನು ಬೆನ್ನತ್ತಿದ ಸಿಎಸ್‌ಕೆ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ್ದು ಆರ್ ಸಿಬಿ ಬೌಲರ್ ಗಳು. ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ತಲಾ 5 ರನ್ ಗಳಿಸಿ ಔಟಾದರು. ಸುರೇಶ್ ರೈನಾ ಶೂನ್ಯಕ್ಕೆ ಔಟಾದರು. ಕೇದಾರ್ ಜಾಧವ್ 9 ರನ್ ಗಳಿಸಿದರೆ, ಅಂಬಾಟಿ ರಾಯುಡು 29 ರನ್ ಗಳಿಸಿದರು. ಸಿಎಸ್‌ಕೆ 5.5 ಓವರ್ ಗಳಲ್ಲಿ 28 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಂತರ ಕ್ರೀಸ್‌ಗೆ ಬಂದ ಧೋನಿ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಮತ್ತೊಂದು ಕಡೆ ವಿಕೆಟ್ ಬೀಳುತ್ತಿದ್ದವು. 15 ಓವರ್ ಗಳಲ್ಲಿ ಸಿಎಸ್‌ಕೆ 5 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿತ್ತು. ಧೋನಿ 27 ಎಸೆತಗಳಲ್ಲಿ 29 ರನ್ ಗಳಿಸಿದ್ದರು. 30 ಎಸೆತಗಳಲ್ಲಿ ಗೆಲುವಿಗೆ 60 ರನ್ ಬೇಕಿತ್ತು. ಮುಂದಿನ ಎರಡು ಓವರ್ ಗಳಲ್ಲಿ 21 ರನ್ ಕಲೆಹಾಕುವ ಮೂಲಕ ಪಂದ್ಯ ರೋಚಕವಾಗುತ್ತ ಸಾಗಿತು.18ನೇ ಓವರ್ ನಲ್ಲಿ ಧೋನಿ ಸಿಕ್ಸರ್ ಸಿಡಿಸುವ ಮೂಲಕ 13 ರನ್ ಗಳಿಸಿದರು, 19ನೇ ಓವರ್ ನಲ್ಲಿ10 ರನ್ ಬಂದಿತು.
ಕೊನೆಯ ಓವರ್ ನಲ್ಲಿ ಸಿಎಸ್‌ಕೆ ಗೆಲುವಿಗೆ 26 ರನ್ ಬೇಕಿತ್ತು, ಉಮೇಶ್ ಯಾದವ್ ಅವರ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಧೋನಿ ಬೌಂಡರಿ ಗಳಿಸಿದರು, ಎರಡು ಮತ್ತು ಮೂರನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು, 4ನೇ ಎಸೆತದಲ್ಲಿ 2 ರನ್ ಗಳಿಸಿದ ಧೋನಿ, 5ನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಸಿಡಿಸಿದರು, ಕೊನೆಯ ಎಸೆತದಲ್ಲಿ ಗೆಲುವಿಗೆ ಕೇವಲ 2 ರನ್ ಬೇಕಿತ್ತು ಧೋನಿ ಇದ್ದ ಕಾರಣ ಸಿಎಸ್‌ಕೆ ಗೆಲುವು ಸುಲಭವಾಗಿತ್ತು, ಆದರೆ ಉಮೇಶ್ ಯಾದವ್ ಅತ್ಯುತ್ತಮವಾಗಿ ಬೌಲ್ ಮಾಡಿದರು, ಧೋನಿ ಅದನ್ನು ಹೊಡೆಯಲು ವಿಫಲವಾದರು.
ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡುವ ಮೂಲಕ ಆರ್ ಸಿಬಿ ಒಂದು ರನ್‌ನ ರೋಚಕ ಗೆಲುವು ಪಡೆದುಕೊಂಡಿತು. 2023ರ ಐಪಿಎಲ್‌ನಲ್ಲಿ ಈಗಾಗಲೇ ಅಂತಹ ರೋಚಕ ಪಂದ್ಯಗಳನ್ನು ನೋಡಿದ್ದೇವೆ, ಇಂದಿನ ಪಂದ್ಯ ಕೂಡ ಹಾಗೆ ರೋಚಕವಾಗಿ ಅಂತ್ಯವಾಗುತ್ತಾ, ಅಭಿಮಾನಿಗಳ ಎದೆಬಡಿತ ಮತ್ತೆ ಹೆಚ್ಚಾಗುತ್ತಾ ಅಂತ ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications