KKR vs PBKS: ಪಂಜಾಬ್ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದು ಪ್ಲೇಆಫ್ ಆಸೆ ಉಳಿಸಿಕೊಂಡ ಕೆಕೆಆರ್!

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 53ನೇ ಪಂದ್ಯ ಇಂದು ( ಮೇ 8 ) ನಡೆದಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು.
ಈ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 180 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿದ್ದು 5 ವಿಕೆಟ್‌ಗಳ ಗೆಲುವನ್ನು ಕಂಡಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ಪರ ನಾಯಕ ಶಿಖರ್ ಧವನ್ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದರು. ಪ್ರಭ್‌ಸಿಮ್ರಾನ್ ಸಿಂಗ್ 12 ರನ್ ಗಳಿಸಿದರೆ, ಶಿಖರ್ ಧವನ್ 47 ಎಸೆತಗಳಲ್ಲಿ 57 ರನ್ ಬಾರಿಸಿದರು. ಇನ್ನುಳಿದಂತೆ ಭಾನುಕ ರಾಜಪಕ್ಸೆ ಡಕ್ಔಟ್, ಲಿಯಾಮ್ ಲಿವಿಂಗ್‌ಸ್ಟನ್ 15, ಜಿತೇಶ್ ಶರ್ಮಾ 21, ಸ್ಯಾಮ್ ಕರನ್ 4, ರಿಷಿ ಧವನ್ 19 ರನ್ ಗಳಿಸಿದರು. ಅಂತಿಮವಾಗಿ ಶಾರುಖ್ ಖಾನ್ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 21 ರನ್ ಗಳಿಸಿದರೆ, ಹರ್‌ಪ್ರೀತ್ ಬ್ರಾರ್ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 17 ರನ್ ಗಳಿಸಿದರು.
19 ಓವರ್‌ಗಳಲ್ಲಿ 159 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ಪರ ಕೊನೆಯ ಓವರ್‌ನಲ್ಲಿ ಶಾರುಖ್ ಖಾನ್ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಮತ್ತು ಹರ್‌ಪ್ರೀತ್ ಬ್ರಾರ್ ಒಂದು ಸಿಕ್ಸರ್ ಬಾರಿಸಿದ ಒಟ್ಟು 20 ರನ್ ಹರಿದುಬಂದ ಕಾರಣ 20 ಓವರ್‌ಗಳಲ್ಲಿ 179 ರನ್ ತಲುಪಿತು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಎರಡು ವಿಕೆಟ್, ಸುಯಶ್ ಶರ್ಮಾ ಹಾಗೂ ನಾಯಕ ನಿತಿಶ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ಪಂಜಾಬ್ ಕಿಂಗ್ಸ್ ನೀಡಿದ ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಜೇಸನ್ ರಾಯ್ ಹಾಗೂ ರಹನ್ಮುಲ್ಲಾ ಗುರ್ಜಬ್ ಕಣಕ್ಕಿಳಿದರು. ಜೇಸನ್ ರಾಯ್ 24 ಎಸೆತಗಳಲ್ಲಿ 38 ರನ್ ಗಳಿಸಿದರೆ, ಗುರ್ಬಜ್ 12 ಎಸೆತಗಳಲ್ಲಿ 15 ರನ್ ಬಾರಿಸಿದರು. ಉಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ನಿತೀಶ್ ರಾಣಾ 38 ಎಸೆತಗಳಲ್ಲಿ 51 ರನ್ ಚಚ್ಚಿದರೆ, ವೆಂಕಟೇಶ್ ಐಯ್ಯರ್ 13 ಎಸೆತಗಳಲ್ಲಿ 11 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಆಂಡ್ರೆ ರಸೆಲ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 42 ರನ್ ಚಚ್ಚಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಸನಿಹಕ್ಕೆ ಬರುವಂತೆ ಮಾಡಿದರು.
ಆಂಡ್ರೆ ರಸೆಲ್ ಜತೆ ಕೈಜೋಡಿಸಿದ ರಿಂಕು ಸಿಂಗ್ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 21 ರನ್ ಬಾರಿಸಿದರು. ಶಾರ್ದುಲ್ ಠಾಕೂರ್ ಯಾವುದೇ ಎಸೆತ ಎದುರಿಸದೇ ಅಜೇಯರಾಗಿ ಉಳಿದರು.
ಸ್ಯಾಮ್ ಕರನ್ ಎಸೆದ 19ನೇ ಓವರ್‌ನಲ್ಲಿ ಆಂಡ್ರೆ ರಸೆಲ್ ಮೂರು ಸಿಕ್ಸರ್ ಚಚ್ಚಿದ ಪರಿಣಾಮ ಕೊನೆಯ 6 ಎಸೆತಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 6 ರನ್‌ಗಳ ಅಗತ್ಯತೆ ಇತ್ತು. ಆದರೆ ಅಂತಿಮ ಓವರ್ ಎಸೆದ ಅರ್ಷ್‌ದೀಪ್ ಸಿಂಗ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದೇ ಡಾಟ್ ಬಾಲ್ ಹಾಕಿದರು. ಎರಡನೇ ಎಸೆತಕ್ಕೆ ಆಂಡ್ರೆ ರಸೆಲ್ ಸಿಂಗಲ್ ತೆಗೆದುಕೊಂಡರು. ಇನ್ನು ಮೂರನೇ ಎಸೆತಕ್ಕೆ ರಿಂಕು ಸಿಂಗ್ ಸಹ ಸಿಂಗಲ್ ಓಡಿದರು ಹಾಗೂ ನಾಲ್ಕನೇ ಎಸೆತದಲ್ಲಿ ರಸೆಲ್ ಎರಡು ರನ್ ಬಾರಿಸಿದರು. ಹೀಗಿರುವಾಗಿ ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿತ್ತು.
ಆದರೆ ಅರ್ಷ್‌ದೀಪ್ ಸಿಂಗ್ ಎಸೆದ ಐದನೇ ಎಸೆತಕ್ಕೆ ರಸೆಲ್ ರನ್ ಬಾರಿಸಲಾಗಲಿಲ್ಲ. ಚೆಂಡು ವಿಕೆಟ್ ಕೀಪರ್ ಕೈ ಸೇರಿದ್ದನ್ನು ಕಂಡು ರಿಂಕು ಸಿಂಗ್ ಹಾಗೂ ರಸೆಲ್ ರನ್ ಓಡಲು ಯತ್ನಿಸಿದರು. ಆದರೆ ಕೀಪರ್ ಚೆಂಡನ್ನು ಅರ್ಷ್‌ದೀಪ್ ಸಿಂಗ್ ಕೈಗೆ ಎಸೆದಿದ್ದರು ಹಾಗೂ ಅರ್ಷ್‌ದೀಪ್ ರನ್ ಔಟ್ ಮಾಡಿದ್ದರು. ಹೀಗೆ ಪಂದ್ಯ ಕೊನೆಯ ಎಸೆತಕ್ಕೆ ಎರಡು ಬಾರಿಸಬೇಕಾದ ಪರಿಸ್ಥಿತಿಗೆ ತಲುಪಿತ್ತು. ಅರ್ಷ್‌ದೀಪ್ ಎಸೆದ ಅಂತಿಮ ಎಸೆತಕ್ಕೆ ರಿಂಕು ಸಿಂಗ್ ಬೌಂಡರಿ ಚಚ್ಚಿದರು ಹಾಗೂ ಈ ಮೂಲಕ ಕೆಕೆಆರ್ ಗೆದ್ದುಬೀಗಿತು.
ಪಂಜಾಬ್ ಕಿಂಗ್ಸ್ ಪರ ರಾಹುಲ್ ಚಹರ್ ಎರಡು ವಿಕೆಟ್, ಹರ್‌ಪ್ರೀತ್ ಬ್ರಾರ್ ಹಾಗೈ ನಾಥನ್ ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಏರಿಕೆ ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ರೇಸ್‌ನಲ್ಲಿ ಮುನ್ನುಗ್ಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications