
ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಾಳೆಗೆ ( ಮೇ 21 ) ಕೊನೆಗೊಳ್ಳಲಿವೆ. ಇಂದು ಹಾಗೂ ನಾಳೆ ದಿನಕ್ಕೆ ಎರಡು ಪಂದ್ಯಗಳು ಆಯೋಜನೆಯಗೊಂಡಿದ್ದು, ಈ ನಾಲ್ಕೂ ಪಂದ್ಯಗಳೂ ಸಹ ಅತಿ ಮುಖ್ಯದ್ದಾಗಿದೆ.
ಹೌದು, ಇಲ್ಲಿಯವರೆಗೂ ಕೇವಲ ಗುಜರಾತ್ ಟೈಟನ್ಸ್ ತಂಡ ಮಾತ್ರ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನುಳಿದ ಮೂರು ಸ್ಥಾನಗಳಿಗೆ ಯಾವ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂಬುದು ಇಂದು ಹಾಗೂ ನಾಳೆ ನಡೆಯುವ ಪಂದ್ಯಗಳ ಫಲಿತಾಂಶದಿಂದ ತಿಳಿದು ಬರಲಿದೆ.
ಇಂದು ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳು ಜರುಗಿದರೆ, ನಾಳೆ ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ ಪಂದ್ಯಗಳು ಜರುಗಲಿವೆ.
ಪ್ಲೇಆಫ್ ರೇಸ್‌ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆದುಕೊಳ್ಳಲಿವೆ. ಹೀಗೆ ಈ ನಾಲ್ಕೂ ಪಂದ್ಯಗಳೂ ಸಹ ಅತಿಮುಖ್ಯದ ಹಣಾಹಣಿಗಳಾಗಿ ಪರಿಣಮಿಸಿವೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಇಂದು ( ಮೇ 20 ) ಸಂಜೆ 7.30 ಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ 13 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು ಒಂದು ಪಂದ್ಯದಲ್ಲಿ ಫಲಿತಾಂಶ ಕಾಣದೇ ಇರುವ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದರೆ 17 ಅಂಕಗಳನ್ನು ಪಡೆದುಕೊಂಡು ಪ್ಲೇಆಫ್‌ಗೆ ಲಗ್ಗೆ ಇಡಲಿದೆ.
ಇನ್ನು 13 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 12 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಈ ಪಂದ್ಯವನ್ನು ಗೆದ್ದರೂ ಸಹ ಪ್ಲೇಆಫ್ ಅನುಮಾನವಾಗಿದೆ. ಆದರೆ ಈ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಲಕ್ನೋ ತಂಡದ ಪ್ಲೇಆಫ್ ಆಸೆ ಮಣ್ಣಾಗುವುದಂತೂ ಪಕ್ಕಾ.
ಹೀಗೆ ಕುತೂಹಲವನ್ನು ಇತ್ತಂಡಗಳ ನಡುವಿನ ಈ ಪಂದ್ಯ ಹುಟ್ಟುಹಾಕಿದ್ದು, ಯಾವ ತಂಡ ಗೆಲ್ಲಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಇನ್ನು ಈ ಎರಡು ತಂಡಗಳ ನಡುವಿನ ಮುಖಾಮುಖಿ ಪಂದ್ಯಗಳ ಫಲಿತಾಂಶದ ಕಡೆ ಗಮನ ಹರಿಸಿದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸ್ಪಷ್ಟ ಮೇಲುಗೈ ಸಾಧಿಸಿರುವುದು ಕಂಡುಬಂದಿದೆ.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಯಾವುದೇ ಪಂದ್ಯದಲ್ಲಿ ಕಣಕ್ಕಿಳಿಯದಿದ್ದು, ಕಳೆದ ಬಾರಿಯ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು.
ತನ್ನ ಪಾಲಿನ ಮೊದಲನೇ ಐಪಿಎಲ್ ಟೂರ್ನಿಯಲ್ಲಿಯೇ ಲಕ್ನೋ ಸೂಪರ್ ಜೈಂಟ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡೂ ಪಂದ್ಯಗಳಲ್ಲಿಯೂ ಸೋಲುಣಿಸಿತ್ತು. ಮೊದಲ ಪಂದ್ಯದಲ್ಲಿ 75 ರನ್‌ಗಳ ಗೆಲುವನ್ನು ಕಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಪಂದ್ಯದಲ್ಲಿ 2 ರನ್‌ಗಳ ಗೆಲುವನ್ನು ಕಂಡಿತ್ತು. ಈ ಮೂಲಕ ಕೊಲ್ಕತ್ತಾ ಇನ್ನೂ ಸಹ ಲಕ್ನೋ ವಿರುದ್ಧ ಗೆಲುವಿನ ಖಾತೆ ತೆರೆಯಬೇಕಿದ್ದು, ಇಂದಿನ ಪಂದ್ಯದಲ್ಲಿ ಆ ಕೆಲಸ ಮಾಡಿದರೆ ಲಕ್ನೋ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.