
ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 56ನೇ ಪಂದ್ಯ ನಾಳೆ ( ಮೇ 11 ) ನಡೆಯಲಿದೆ. ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7.30ಕ್ಕೆ ಪಂದ್ಯ ಶುರುವಾಗಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿರುವ ಮೊದಲ ಪಂದ್ಯ ಇದಾಗಿದೆ.
ಸದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಅಂಕಪಟ್ಟಿಯಲ್ಲಿ ಹೆಚ್ಚೇನೂ ವ್ಯತ್ಯಾಸಗಳನ್ನೇನೂ ಹೊಂದಿಲ್ಲ. ಎರಡೂ ತಂಡಗಳು ಸರಿ ಸಮನಾದ ಅಂಕಗಳನ್ನು ಹೊಂದಿದ್ದು ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ರನ್ ರೇಟ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನೆಟ್ ರನ್ ರೇಟ್‌ಗಿಂತ ಉತ್ತಮವಾಗಿರುವ ಕಾರಣ ಅಂಕಪಟ್ಟಿಯಲ್ಲಿ ತುಸು ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.
ಹೌದು, ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 5 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲುವುದರ ಮೂಲಕ 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡ ಸಹ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 5 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇನ್ನು ಈ ಎರಡು ತಂಡಗಳ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳೂ ಸಹ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಪಡೆದುಕೊಂಡಿರುವ ಕಾರಣ ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಪ್ಲೇಆಫ್ ರೇಸ್‌ನಲ್ಲಿ ಮತ್ತೊಂದು ಹಂತ ಮೇಲಕ್ಕೇರಲಿದೆ ಹಾಗೂ ಸೋಲಲಿರುವ ತಂಡ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬೀಳಲಿದೆ.
ಹೀಗಾಗಿ ಈ ಪಂದ್ಯ ಮಹತ್ವದ ಸೆಣಸಾಟವಾಗಿ ಪರಿಣಮಿಸಿದ್ದು, ಕೇವಲ ಇತ್ತಂಡಗಳ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ತಂಡಗಳ ಅಭಿಮಾನಿಗಳ ಗಮನವನ್ನೂ ಸಹ ಸೆಳೆದಿದೆ. ಹೀಗೆ ಕುತೂಹಲ ಕೆರಳಿಸಿರುವ ಈ ಪಂದ್ಯದ ಕುರಿತು ಚರ್ಚೆಗಳು ಆರಂಭಗೊಂಡಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇಲ್ಲಿಯವರೆಗೂ ಮುಖಾಮುಖಿಯಾಗಿರುವ ತಂಡಗಳ ಪೈಕಿ ಯಾವ ತಂಡ ಹೆಚ್ಚು ಪಂದ್ಯಗಳಲ್ಲಿ ಗೆದ್ದಿದೆ ಎಂಬ ಮಾಹಿತಿ ಇಲ್ಲಿದೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಲ್ಲಿಯವರೆಗೂ ಒಟ್ಟು 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದಿದ್ದು, ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿದೆ.
ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ.