
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆದ್ದು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಐದು ಬಾರಿಯ ಚಾಂಪಿಯನ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ಪ್ರವೇಶ ಮಾಡುವ ಮೂಲಕ ಕಮ್‌ಬ್ಯಾಕ್ ಮಾಡಿದೆ.
ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸೋತು ಮುಗ್ಗರಿಸಿದ್ದ ಮುಂಬೈ ಇಂಡಿಯನ್ಸ್ ನಂತರದ ಪಂದ್ಯಗಳಲ್ಲಿ ಪುಟಿದೆದ್ದು ಈ ಹಂತಕ್ಕೆ ತಲುಪಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಕಮ್‌ಬ್ಯಾಕ್ ಮಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ನಾಯಕ ರೋಹಿತ್ ಶರ್ಮಾ ಚಾಣಾಕ್ಷತನವನ್ನೂ ಸಹ ಕೊಂಡಾಡಿದ್ದಾರೆ.
ಬಲಿಷ್ಟ ತಂಡವಿಲ್ಲದಿದ್ದರೂ ರೋಹಿತ್ ಶರ್ಮಾ ಜಾಣ್ಮೆಯ ನಾಯಕತ್ವದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಗೊಳಿಸಿರುವುದರ ಕುರಿತು ಶ್ಲಾಘನೆಗಳು ವ್ಯಕ್ತವಾಗಿವೆ. ಇನ್ನು ನಾಯಕನಾಗಿ ಗೆದ್ದಿರುವ ರೋಹಿತ್ ಶರ್ಮಾ ಬ್ಯಾಟ್ ಮೂಲಕ ಅಷ್ಟೇನೂ ಸದ್ದು ಮಾಡಿಲ್ಲ.
ಹಲವು ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಲಾಗದೇ ತಿಣುಕಾಡಿದ ರೋಹಿತ್ ಶರ್ಮಾ ಕುರಿತು ಟ್ರೋಲ್‌ಗಳೂ ಸಹ ವ್ಯಕ್ತವಾಗಿದ್ದವು. 14 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ 313 ರನ್ ಕಲೆಹಾಕಿದ್ದು, ಕೇವಲ 2 ಅರ್ಧಶತಕಗಳನ್ನು ಬಾರಿಸಿದ್ದಾರಷ್ಟೇ. ಹೀಗೆ ಟೂರ್ನಿಯಲ್ಲಿ ದೊಡ್ಡ ರನ್ ಕಲೆಹಾಕದ ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ರೋಹಿತ್ ಶರ್ಮಾ ಐಪಿಎಲ್ ಆವೃತ್ತಿಯೊಂದರಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದ್ದಾಗ ಭಾರತದ ಪ್ರಧಾನ ಮಂತ್ರಿ ಯಾರಾಗಿದ್ರು ಗೊತ್ತಾ ಎಂದು ಟ್ರೋಲ್ ಹರಿದಾಡುತ್ತಿದೆ. ರೋಹಿತ್ ಶರ್ಮಾ ಕೊನೆಯ ಬಾರಿಗೆ ಐಪಿಎಲ್ ರನ್ ಗಳಿಸಿದ್ದಾಗ ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್ ಆಗಿದ್ರು, ಜಿಯೋ ಸಿಮ್ ಇನ್ನೂ ಮಾರುಕಟ್ಟೆಗೆ ಬಂದಿರಲಿಲ್ಲ, ಎಂ ಎಸ್ ಧೋನಿ ಎರಡನೇ ಐಸಿಸ ಟ್ರೋಫಿ ಗೆದ್ದಿದ್ದರು, ಯಶಸ್ವಿ ಜೈಸ್ವಾಲ್ ವಯಸ್ಸು ಕೇವಲ 11, ಕೊಹ್ಲಿ ಅಂತರರಾಷ್ಟ್ರೀಯ ಶತಕದ ಸಂಖ್ಯೆ 17 ಆಗಿತ್ತು, ಐಫೋನ್ 5 ಲೇಟೆಸ್ಟ್ ಮಾಡೆಲ್ ಆಗಿತ್ತು ಎಂದು 'ಸ್ಪೋರ್ಟ್ಸ್ ಒನ್ ಕನ್ನಡ' ಫೇಸ್‌ಬುಕ್ ಪೇಜ್ ಟ್ರೋಲ್ ಮಾಡಿದೆ.
ಅಂದಹಾಗೆ ರೋಹಿತ್ ಶರ್ಮಾ ಕೊನೆಯದಾಗಿ 500+ ರನ್ ಗಳಿಸಿದ್ದು 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ. ಅಲ್ಲದೇ ರೋಹಿತ್ ಶರ್ಮಾ ಸೀಸನ್‌ವೊಂದರಲ್ಲಿ 500+ ರನ್ ಗಳಿಸಿದ್ದು ಅದೇ ಮೊದಲೂ ಸಹ. ಉಳಿದ ಯಾವುದೇ ಸೀಸನ್‌ನಲ್ಲಿಯೂ ಸಹ ರೋಹಿತ್ ಶರ್ಮಾ 500 ರನ್ ಮುಟ್ಟುವಲ್ಲಿ ಯಶಸ್ವಿಯಾಗಿಲ್ಲ. ಆ ಆವೃತ್ತಿಯಲ್ಲಿ ರೋಹಿತ್ ಶರ್ಮಾ 19 ಪಂದ್ಯಗಳಲ್ಲಿ ಕಣಕ್ಕಿಳಿದು 4 ಅರ್ಧಶತಕಗಳ ಸಹಿತ 538 ರನ್ ಕಲೆಹಾಕಿದ್ದರು.
ರೋಹಿತ್ ಶರ್ಮಾ 2008ರಿಂದ 2023ರ ಐಪಿಎಲ್‌ವರೆಗೆ ಗಳಿಸಿರುವ ರನ್ ವಿವರ ಈ ಕೆಳಕಂಡಂತಿದೆ..
2008 - 12 ಇನ್ನಿಂಗ್ಸ್, 404 ರನ್
2009 - 16 ಇನ್ನಿಂಗ್ಸ್, 362 ರನ್
2010 - 16 ಇನ್ನಿಂಗ್ಸ್, 404 ರನ್
2011- 14 ಇನ್ನಿಂಗ್ಸ್, 372 ರನ್
2012 - 16 ಇನ್ನಿಂಗ್ಸ್, 433 ರನ್
2013 - 19 ಇನ್ನಿಂಗ್ಸ್, 538 ರನ್
2014 - 15 ಇನ್ನಿಂಗ್ಸ್, 390 ರನ್
2015 - 16 ಇನ್ನಿಂಗ್ಸ್, 482 ರನ್
2016- 14 ಇನ್ನಿಂಗ್ಸ್, 489 ರನ್
2017 - 16 ಇನ್ನಿಂಗ್ಸ್, 333 ರನ್
2018 - 14 ಇನ್ನಿಂಗ್ಸ್, 286 ರನ್
2019 -15 ಇನ್ನಿಂಗ್ಸ್, 405 ರನ್
2020 - 12 ಇನ್ನಿಂಗ್ಸ್, 332 ರನ್
2021 -13 ಇನ್ನಿಂಗ್ಸ್, 381 ರನ್
2022 - 14 ಇನ್ನಿಂಗ್ಸ್, 268 ರನ್
2023 - 14 ಇನ್ನಿಂಗ್ಸ್, 313 ರನ್*