ಸೋಮವಾರ, ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಸೆಣಸಾಡಲಿವೆ.
ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ ಐಪಿಎಲ್ 2023ರಲ್ಲಿ ಆಡಿದ 2 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದಿದ್ದು, ಕಳೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೊರಗುಳಿದಿದ್ದರು. ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಹಿಂದಿರಗಲಿದ್ದು, ಎಲ್‌ಎಸ್‌ಜಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಆರ್‌ಸಿಬಿ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯವ ಸಾಧ್ಯತೆ ಇದೆ. ಏಕೆಂದರೆ ಅವರ ಬದಲಿಯಾಗಿ ಆಡುತ್ತಿರುವ ಕೈಲ್ ಮೇಯರ್ಸ್ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಕೈಲ್ ಮೇಯರ್ಸ್ ಮೊದಲ ಮೂರು ಪಂದ್ಯಗಳಲ್ಲಿ ಅಗ್ರಕ್ರಮಾಂಕದಲ್ಲಿ 187.83ರ ಸ್ಟ್ರೈಕ್‌ರೇಟ್‌ನಲ್ಲಿ ಸ್ಫೋಟಕ ಆರಂಭ ನೀಡಿದ್ದಾರೆ.

ಕೈಲ್ ಮೇಯರ್ಸ್ ಅವರೊಂದಿಗೆ ನಾಯಕ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರನ್ನು ಮುಂದುವರೆಸಲು ಬಯಸಿದೆ.
ಇನ್ನು ಆರ್‌ಸಿಬಿ ತಂಡಕ್ಕೆ ರೀಸ್ ಟೋಪ್ಲೆ ಬದಲಾಗಿ ವೇಯ್ನ್ ಪಾರ್ನೆಲ್ ಆಯ್ಕೆಯಾಗಿದ್ದಾರೆ. 2022ರಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದ ವನಿಂದು ಹಸರಂಗ ತಂಡವನ್ನು ಕೂಡಿಕೊಂಡಿದ್ದಾರೆ. ಇದು ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸುಧಾರಿಸಲಿದೆ. ಅಲ್ಲದೇ ರಜತ್ ಪಾಟಿದಾರ್ ಬದಲಿಗೆ ಕನ್ನಡಿಗ ವೈಶಾಖ್ ವಿಜಯಕುಮಾರ್ ಸೇರ್ಪಡೆಯಾಗಿದ್ದಾರೆ. ಆದರೆ ಆಡುವ ಬಳಗದಲ್ಲಿ ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕು.
ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೀಸ್ ಟೋಪ್ಲೆ ಅನುಪಸ್ಥಿತಿಯಲ್ಲಿ ಬೌಲಿಂಗ್ ಮಾಡಿದ್ದ ಡೇವಿಡ್ ವಿಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ವೇಗಿ ಗಾಯಾಳು ಅವೇಶ್ ಖಾನ್ ಅವರ ಸೇವೆಯನ್ನು ತಪ್ಪಿಸಿಕೊಳ್ಳಲಿದೆ.

ಆರ್‌ಸಿಬಿ vs ಎಲ್ಎಸ್‌ಜಿ ಸಂಭಾವ್ಯ ಆಡುವ 11ರ ಬಳಗ
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ / ಮೈಕಲ್ ಬ್ರೆಸ್‌ವೆಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್ / ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೊನಿ, ರೊಮಾರಿಯೊ ಶೆಫರ್ಡ್ / ಮಾರ್ಕ್ ವುಡ್, ಯಶ್ ಠಾಕೂರ್, ರವಿ ಬಿಷ್ಣೋಯಿ, ಜಯದೇವ್ ಉನಾದ್ಕಟ್.