IPL 2023 GT Vs RR Preview : ಹೈ ವೋಲ್ಟೇಜ್ ಪಂದ್ಯದಲ್ಲಿ ಗೆಲುವು ಯಾರಿಗೆ? ಪ್ಲೇಯಿಂಗ್ 11, ಪಿಚ್ ಮತ್ತು ಹವಾಮಾನ ವರದಿ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ 23ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ರನ್ನರ್ ಅಪ್ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣೆಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಭಾನುವಾರ (ಇಂದು) ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
2022ರ ಆವೃತ್ತಿಯಲ್ಲಿ ಎರಡೂ ತಂಡಗಳು ಫೈನಲ್ ತಲುಪಿದ್ದವು. ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದರೆ, ರಾಜಸ್ಥಾನ ರಾಯಲ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಸಂಜು ಸ್ಯಾಮ್ಸನ್ ಪಡೆ ಕಳೆದ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದರೆ, ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ ಪಾಂಡ್ಯ ಪಡೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನುಭವಿಸಿದ ಗುಜರಾತ್ ಟೈಟಾನ್ಸ್ ನಂತರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಜಯದ ಹಳಿಗೆ ಮರಳಿದೆ. ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಕಂಡಿರುವ ಹಾಲಿ ಚಾಂಪಿಯನ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.
ರಾಜಸ್ಥಾನ ರಾಯಲ್ಸ್ ಕೂಡ ಕಳೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. 4 ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್‌ಗಳಿಗೆ ಸೋಲಿನ ರುಚಿ ತೋರಿಸಿದರೆ ಅಗ್ರಸ್ಥಾನದಲ್ಲೇ ಮುಂದುವರೆಯಬಹುದು.

ಗುಜರಾತ್ ವಿರುದ್ಧ ಇನ್ನೂ ಗೆದ್ದಿಲ್ಲ ರಾಜಸ್ಥಾನ
ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಇದುವರೆಗೂ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮೂರು ಪಂದ್ಯಗಳನ್ನು ಗುಜರಾಜ್ ಟೈಟಾನ್ಸ್ ಗೆದ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದರೆ ಹಾಲಿ ಚಾಂಪಿಯನ್‌ಗಳ ವಿರುದ್ಧ ಮೊದಲ ಗೆಲುವು ಸಾಧಿಸಿದಂತಾಗುತ್ತದೆ. ಅಹಮದಾಬಾದ್‌ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸುವ ನೆಚ್ಚಿನ ತಂಡವಾಗಿದೆ.

ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅವಕಾಶ
ಈ ಬಾರಿ ಐಪಿಎಲ್‌ನಲ್ಲಿ ಇಲ್ಲಿ ಎರಡು ಪಂದ್ಯಗಳು ನಡೆದಿದ್ದು ಎರಡರಲ್ಲೂ ಚೇಸಿಂಗ್ ಮಾಡಿದ ತಂಡವೇ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 179 ರನ್‌ಗಳನ್ನು ಚೇಸ್ ಮಾಡಿದ್ದ ಗುಜರಾತ್ ಟೈಟನ್ಸ್ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 204 ರನ್ ಕಲೆಹಾಕಿದರೂ ಕೆಕೆಆರ್ ಕೊನೆಯ ಓವರ್ ನಲ್ಲಿ 31 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.
ಅಹಮದಾಬಾದ್ ಪಿಚ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವುದರಿಂದ ಟಾಸ್ ಗೆಲ್ಲುವ ತಂಡ ಚೇಸಿಂಗ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಎರಡೂ ತಂಡಗಳಲ್ಲಿ ಅನುಭವಿ ಬ್ಯಾಟಿಂಗ್ ಪಡೆ ಹೊಂದಿದ್ದು ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಇಲ್ಲಿನ ತಾಪಮಾನವು 35 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿರುತ್ತದೆ ಎಂದು ಹೇಳಲಾಗಿದೆ.
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ 11
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್
ರಾಜಸ್ಥಾನ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಕುಲದೀಪ್ ಸೇನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications