ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಹೋರಾಟ ಪ್ರದರ್ಶಿಸಿದ್ದು ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಇದೀಗ ಅದೇ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ಎದುರಾಳಿಯಾಗಿ ಕಣಕ್ಕಿಳಿಯಲಿರುವುದು ಡೆಲ್ಲಿ ಕ್ಯಾಪಿಟಲ್ಸ್. ಈಗಾಗಲೇ ತವರಿನ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ ವಿರುದ್ಧ ಸೆಣೆಸಾಡಿ ಗೆದ್ದಿರುವ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರಿನಲ್ಲಿ ಆಡಲು ಈಗ ಸಜ್ಜಾಗಿದೆ.
ಶನಿವಾರ ಸಂಜೆ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರು ಮೈದಾನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಎರಡು ತಂಡಗಳು ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದೆ. ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಾ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಸುಳಿಯಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದು ಕೊನಯ ಸ್ಥಾನದಲ್ಲಿಯೇ ಮುಂದುವರಿದಿದೆ.

ಆರ್‌ಸಿಬಿ ತಂಡ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಗೆಲವುಉ ಸಾಧಿಸುವುದರ ಜೊತೆಗೆ ನೆಟ್ ರನ್‌ರೆಟ್‌ನಲ್ಲಿಯೂ ಪ್ರಗತಿ ಸಾಧಿಸುವದು ಆರ್‌ಸಿಬಿ ತಂಡಕ್ಕೆ ಅನಿವಾರ್ಯವಾಗಿದೆ. ಸದ್ಯ ಸಾಕಷ್ಟು ಪೈಪೋಟಿಯಿರುವ ಕಾರಣ ಅಂತಿಮ ಹಂತದಲ್ಲಿ ನೆಟ್‌ರನ್‌ರೇಟ್ ನಿರ್ಣಾಯಕ ಪಾತ್ರವಹಿಸುವ ಸಾಧ್ಯಗಳು ಕೂಡ ಇರುವ ಕಾರಣ ಈ ವಿಚಾರದಲ್ಲಿಯೂ ಆರ್‌ಸಿಬಿ ಪ್ರಗತಿ ಕಾಣಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು ಮಾತ್ರವೇ ಸಾಧಿಸಿದ್ದು ಕೊನೆಯ ಸ್ಥಾನದಲ್ಲಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧದ ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೇ 6 ಶನಿವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್ ಹೀಗಿದೆ
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಪಂದ್ಯದುದ್ದಕ್ಕೂ ಸ್ಪಿನ್ನರ್‌ಗಳಿಗೆ ಅದ್ಭುತವಾಗಿ ನೆರವು ನೀಡಲಿದೆ. ಹೊಸ ಚೆಂಡು ಬ್ಯಾಟ್‌ಗೆ ಉತ್ತಮವಾಗಿ ಬರಲಿದ್ದು ಪವರ್‌ಪ್ಲೇ ಅವಧಿಯಲ್ಲಿ ಬ್ಯಾಟರ್‌ಗಳು ಮಿಂಚುವ ಅವಕಾಶವಿದೆ. ಆದರೆ ಪಂದ್ಯ ಮುಂದುವರಿದಂತೆ ಪಿಚ್ ನಿಧಾನವಾಗಲಿದ್ದು ಬ್ಯಾಟಿಂಗ್ ಸವಾಲೆನಿಸಲಿದೆ. ಈ ಮೈದಾನದ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 160-175 ಆಗಿದೆ.
ಹವಾಮಾನ ವರದಿ: ಪಂದ್ಯದ ದಿನವಾಗಿರುವ ಶನಿವಾರ ದೆಹಲಿಯ ವಾತಾವರಣ ಪಂದ್ಯಕ್ಕೆ ಪೂರಕವಾಗಿದೆ. ಮಳೆಯಾಗುವ ಸಾಧ್ಯತೆಯಿಲ್ಲ. ಉಷ್ಣಾಂಶ 24-36 ಡಿಗ್ರಿ ಮಧ್ಯೆ ಇರುವ ಸಾಧ್ಯತೆಯಿದೆ.
ಇತ್ತಂಡಗಳ ಸಂಭಾವ್ಯ ಆಡುವ ಬಳಗ:
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಿಲೀ ರೊಸೊವ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್