ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಟೂರ್ನಿ ಕೊನೆಯ ಹಂತವನ್ನು ತಲುಪಿರುವಾಗಿ ಪ್ಲೇಆಫ್ ಪ್ರವೇಶಕ್ಕಾಗಿ ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಸದ್ಯ ಎರಡು ತಂಡಗಳು ಸಮಾನ ಅಂಕಗಳನ್ನು ಪಡೆದುಕೊಂಡಿದ್ದು ಅಂತಿಮ ನಾಲ್ಕರ ಘಟ್ಟಕ್ಕೇರಲು ಪೈಪೋಟಿ ನಡೆಸುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 6 ಸೋಲು ಕಂಡಿದೆ. ಹೀಗಾಗಿ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ ಆರ್‌ಆರ್. ಆರಂಭದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ಕಳೆದ ಆರು ಪಂದ್ಯಗಳಲ್ಲಿ ಐದು ಸೋಲು ಅನುಭವಿಸಿ ಸಂಕಷ್ಟದಲ್ಲಿದೆ. ಈ ಹಿಂದಿನ ಮೂರು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಹ್ಯಾಟ್ರಿಕ್ ಸೋಲು ಕಂಡಿರುವ ಆರ್‌ಆರ್ ಸೋಲಿನ ಸುಳಿಯಿಂದ ಹೊರಬರುವ ಪ್ರಯತ್ನದಲ್ಲಿದೆ.

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆರ್‌ಆರ್ ರೀತಿಯಲ್ಲಿಯೇ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿರುವ ಕೆಕೆಆರ್ 10 ಅಂಕಗಳನ್ನು ಪಡೆದುಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಬೃಹತ್ ರನ್ ಬೆನ್ನಟ್ಟಿ ಸಾಧಿಸಿರುವ ಗೆಲುವು ಕೆಕೆಆರ್ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಹಗಳ ನಡುವಿನ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಮೇ 11 ಗುರುವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
KKR vs RR ಪಿಚ್ ರಿಪೋರ್ಟ್
ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣ ಈವರೆಗೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ 83 ಪಂದ್ಯಗಳನ್ನು ಆಯೋಜನೆ ಮಾಡಿದೆ. ಈ ಮೈದಾನ ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿದ್ದು ದೇಶದ ಹೈಸ್ಕೋರಿಂಗ್ ತಾಣಗಳಲ್ಲಿ ಒಂದೆನಿಸಿಕೊಂಡಿದೆ. ಇಲ್ಲಿ 180ಕ್ಕಿಂತ ಕಡಿಮೆ ರನ್‌ಗಳಿಸಿದರೆ ರನ್ ರಕ್ಷಿಸಿಕೊಳ್ಳುವುದು ಅಸಾಧ್ಯ ಎಂಬಂಥಾ ಸನ್ನಿವೇಶವಿದೆ. ಹಾಗಾಗಿ ಇಲ್ಲಿಟಾಸ್ ಗೆದ್ದ ತಂಡ ರನ್ ಬೆನ್ನಟ್ಟುವ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ.
ಹವಾಮಾನ ವರದಿ ಹೇಗಿದೆ?: ಈ ಪಂದ್ಯಕ್ಕೆ ಮಳೆಯ ಆತಂಕವಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಯೋಜನೆಯಾಗಲಿದೆ. 29-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರುವ ಸಾಧ್ಯತೆಯಿದೆ.
ಇತ್ತಂಡಗಳ ಆಡುವ ಬಳಗ
ಕೊಲ್ಕತ್ತಾ ನೈಟ್ ರೈಡರ್ಸ್: ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್