IPL 2023, MI vs GT: ಗುಜರಾತ್ ಟೈಟನ್ಸ್‌ಗೆ ಮುಂಬೈ ಇಂಡಿಯನ್ಸ್ ಸವಾಲು: ಸಂಭಾವ್ಯ ಆಡುವ ಬಳಗ, ಪಿಚ್ ರಿಪೋರ್ಟ್
ಐಪಿಎಲ್‌ನಲ್ಲಿ ಶುಕ್ರವಾರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ. ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಗಳ ನಡುವಿನ ಈ ಕಾಳಗ ಈಗ ಸಾಕಷ್ಟು ಕುತೂಹಲ ಮೂಡಿಸಿದ್ದು ಯಾರಿಗೆ ಮೇಲುಗೈ ದೊರೆಯಲಿದೆ ಎಂಬ ಕುತೂಹಲ ಕೆರಳಿಸಿದೆ.
ಗುಜರಾತ್ ಟೈಟನ್ಸ್ ತಂಡ ಟೂರ್ನಿಯಲ್ಲಿ ಬಹುತೇಕ ಪ್ಲೇಆಫ್‌ಗೆ ಪ್ರವೇಶಿಸಿದ್ದು ಅಧಿಕೃತವಾಗಿ ಖಚಿತಗೊಳ್ಳಬೇಕಿದೆ. ಈಗ ಅದರ ಕಣ್ಣು ನಿಶ್ಚಿತವಾಗಿ ಅಗ್ರಸ್ಥಾನದಲ್ಲಿಯೇ ಮುಂದುವರಿಯುವುದು. ಹೀಗಾಗಿ ಇಲ್ಲಿಯವರೆಗೆ ನೀಡಿರುವ ಸಂಘಟಿತ ಪ್ರದರ್ಶನವನ್ನು ಮುಂದುವರಿಸುವತ್ತ ಚಿತ್ತ ನೆಡಲಿದೆ. ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಜಿಟಿ ತಂಡ ಈಗಾಗಲೇ ಖಾತೆಯಲ್ಲಿ 16 ಅಂಕಗಳನ್ನು ಹೊಂದಿದ್ದು ಉಳಿದ ತಂಡಗಳಿಗಿಂತ ಭಾರೀ ಮುಂದಿದೆ.

ಇನ್ನು ಮುಂಬೈ ಇಂಡಿಯನ್ಸ್ ಆರಂಬಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಮಹತ್ವದ ಘಟ್ಟದಲ್ಲಿ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿದೆ. ಪ್ರಮುಖ ಆಟಗಾರರು ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ತಂಡದ ನಾಯಕ ರೋಹಿತ್ ಶರ್ಮಾ ಫಾರ್ಮ್ ಮಾತ್ರವೇ ತಂಡಕ್ಕೆ ಸದ್ಯ ಕಳವಳಕಾರಿಯಾಗಿದ್ದು ರೋಹಿತ್ ಯಾವುದೇ ಸಂದರ್ಭದಲ್ಲಿಯೂ ಲಯಕ್ಕೆ ಮರಳುವ ಸಾಮರ್ಥ್ಯವಿರುವ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 11 ಗುರುವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
MI vs GT ಪಿಚ್ ರಿಪೋರ್ಟ್
ಮುಂಬೈನ ವಾಂಖೆಡೆ ಕ್ರೀಡಾಂಗಣ ಯಾವಾಗಲೂ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಹಾಗಾಗಿ ಇಲ್ಲಿ ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಎರಡು ತಂಡಗಳು 200ಕ್ಕೂ ಅಧಿಕ ರನ್‌ಗಳಿಸಿದರೂ ಇಲ್ಲಿ ಅಚ್ಚರಿಯಿಲ್ಲ. ಉಳಿದ ತಾಣಗಳಿಗೆ ಹೋಲಿಸಿದರೆ ಇಲ್ಲಿ ಬ್ಯಾಟರ್‌ಗಳು ಸುಲಭವಾಗಿ ರನ್‌ಗಳನ್ನು ಗಳಿಸಲು ಅವಕಾಶ ದೊರೆಯಲಿದೆ. ಇಲ್ಲಿ ಬೌಲಿಂಗ್ ವಿಭಾಗಕ್ಕೆ ಕಠಿಣ ಸವಾಲು ಎದುರಾಗಲಿದ್ದು ಯಾವ ತಂಡ ಹೆಚ್ಚಿನ ನಿಯಂತ್ರಣ ಸಾಧಿಸಲಿದೆ ಅವರಿಗೆ ಪಂದ್ಯ ಗೆಲ್ಲುವ ಉತ್ತಮ ಅವಕಾಶವಿದೆ.
ಹವಾಮಾನ ವರದಿ ಹೇಗಿದೆ?: ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಯೋಜನೆಯಾಗಲಿದ್ದು, 29-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಕ್ಯಾಮೆರಾನ್ ಗ್ರೀನ್, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications