CSK vs LSG Preview: ತವರಿನಲ್ಲಿ ಗೆಲುವು ಕಾಣುತ್ತಾ ಚೆನ್ನೈ ಸೂಪರ್ ಕಿಂಗ್ಸ್: ಪ್ಲೇಯಿಂಗ್ 11, ಪಿಚ್ ವರದಿ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ವರ್ಷಗಳ ಬಳಿಕ ಚೆಪಾಕ್ ಅಂಗಳದಲ್ಲಿ ಆಡಲು ಸಿದ್ಧವಾಗಿದೆ. ಚಿದಂಬರಂ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಸೋಮವಾರ ಸಂಜೆ 7.30ಕ್ಕೆ ಆರಂಭವಾಗುವ ಪಂದ್ಯದಲ್ಲಿ ಸಿಎಸ್‌ಕೆ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ತವರಿನಲ್ಲಿ ನಡೆಯುವ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ ಸಿಎಸ್‌ಕೆ.
ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ತಂಡ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೋತು ಮುಖಭಂಗ ಅನುಭವಿಸಿತ್ತು. ಬಲಿಷ್ಠ ತಂಡವನ್ನು ಕಟ್ಟಿದ್ದರೂ, ನಿರೀಕ್ಷಿತ ಪ್ರದರ್ಶನ ನೀಡದಿರುವುದು ಸೋಲಿಗೆ ಕಾರಣವಾಗಿದೆ. ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಡಿವೊನ್ ಕಾನ್ವೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಬೌಲಿಂಗ್ ವಿಭಾಗದಲ್ಲಿ ಕೂಡ ಸಿಎಸ್‌ಕೆ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಮೊದಲನೇ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ ಧೋನಿ ಬಳಗ. ತವರಿನಲ್ಲಿ ಪಂದ್ಯವನ್ನಾಡುತ್ತಿರುವುದು ಸಿಎಸ್‌ಕೆ ತಂಡಕ್ಕೆ ಲಾಭವಾಗಿದೆ. ಆದರೆ, ತಮ್ಮ ಮೊದಲನೇ ಪಂದ್ಯದಲ್ಲೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಚಿದಂಬರಂ ಕ್ರೀಡಾಂಗಣದ ಪಿಚ್ ವರದಿ
ಚೆನ್ನೈ ಪಿಚ್ ಸಾಮನ್ಯವಾಗಿ ಬೌಲರ್ ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಸ್ಪಿನ್ನರ್ ಗಳು ಇಲ್ಲಿ ಹೆಚ್ಚಾಗಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 138 ಆಗಿದೆ. 67 ಐಪಿಎಲ್ ಪಂದ್ಯಗಳು ನಡೆದಿದ್ದು, 41 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಸಾಧಿಸಿದ್ದರೆ, 26 ಪಂದ್ಯಗಳಲ್ಲಿ ಚೇಸಿಂಗ್ ಮಾಡುವ ತಂಡ ಗೆಲುವು ಕಂಡಿದೆ. ಇದನ್ನು ಗಮನಿಸಿದರೆ, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೀಶ್ ತೀಕ್ಷಣ ಲಭ್ಯವಿಲ್ಲದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮೊಯೀನ್ ಅಲಿ, ಮಿಚೆಲ್ ಸ್ಯಾಂಟ್ನರ್ ಮತ್ತು ರವೀಂದ್ರ ಜಡೇಜಾ ಮಿಂಚಿದರೆ ಮಾತ್ರ ಸಿಎಸ್‌ಕೆ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ಬ್ಯಾಟಿಂಗ್‌ನಲ್ಲಿ ಋತುರಾಜ್ ಗಾಯಕ್ವಾಡ್ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದು ಇತರೆ ಬ್ಯಾಟರ್ ಗಳು ಕೂಡ ರನ್ ಗಳಿಸಬೇಕಾಗುತ್ತದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಎರಡನೇ ಪಂದ್ಯಕ್ಕೆ ಕೂಡ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅಲಭ್ಯರಾಗಿದ್ದು, ಕೈಲ್ ಮೇಯರ್ಸ್ ಮತ್ತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಾಹುಲ್, ಪೂರನ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಬೇಕಿದೆ. ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್ ಅವರಂತ ಸ್ಪಿನ್ನರ್ ಗಳು ಇದ್ದು ತಂಡ ಉತ್ತಮವಾಗಿದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಸಿಎಸ್‌ಕೆ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ), ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ರಾಜವರ್ಧನ್ ಹಂಗರ್ಗೇಕರ್. ಇಂಪ್ಯಾಕ್ಟ್ ಪ್ಲೇಯರ್: ಶೈಕ್ ರಶೀದ್, ನಿಶಾಂತ್ ಸಿಂಧು, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಅಜಿಂಕ್ಯ ರಹಾನೆ.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್. ಇಂಪ್ಯಾಕ್ಟ್ ಪ್ಲೇಯರ್: ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಕರಣ್ ಶರ್ಮ, ಅಮಿತ್ ಮಿಶ್ರಾ, ಸ್ವಪ್ನಿಲ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications