ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಭಾನುವಾರ ಅಂತಿಮ ಲೀಗ್ ಪಂದ್ಯ ನಡೆಯಲಿದೆ. ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಪಂದ್ಯ ಕುತೂಹಲ ಮೂಡಿಸಿದೆ. ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಫ್‌ಗೆ ಪ್ರವೇಶಿಸಿದ್ದು ಆರ್‌ಸಿಬಿ ತಂಡಕ್ಕೆ ಈ ಪಂದ್ಯ ಮಹತವದ್ದಾಗಿದೆ.
ಆರ್‌ಸಿಬಿ ತಂಡ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ಪ್ಲೇಆಫ್ ಪ್ರವೇಶದ ರೇಸ್‌ನಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ತಂಡದ ಪ್ಲೇಆಫ್ ಸ್ಥಾನ ಖಚಿತವಾಗಬೇಕಿದ್ದರೆ ಭಾನುವಾರದ ಈ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಅಗತ್ಯ. ಆರ್‌ಸಿಬಿ ಈ ಆವೃತ್ತಿಯಲ್ಲಿ ಈವರೆಗೆ 13 ಪಂದ್ಯಗಳನ್ನು ಆಡಿದ್ದು 14 ಪಂದ್ಯಗಳನ್ನು ಖಾತೆಯಲ್ಲಿ ಹೊಂದಿದೆ. ಜಿಟಿ ವಿರುದ್ಧದ ಪಂದ್ಯ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಇನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯೂ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸುತ್ತಿದೆ. ಈವರೆಗೆ ಆಡಿರುವ 13 ಪಂದ್ಯಗಳ ಪೈಕಿ ಜಿಟಿ ತಂಡ 9 ಗೆಲುವು ಸಾಧಿಸಿದ್ದು 18 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಈ ಮೂಲಕ ಅಗ್ರಸ್ಥಾನದಲ್ಲಿ ಪ್ಲೇಆಫ್‌ಗೆ ಪ್ರವೇಶಿಸುವುದು ಖಚಿತವಾಗಿದೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಬಳಗಕ್ಕೆ ಈ ತಂಡ ಯಾವುದೇ ಮಹತ್ವವಿಲ್ಲ. ಆದರೆ ಆರ್‌ಸಿಬಿ ತಂಡದ ಪ್ಲೇಆಫ್ ಕನಸನ್ನು ಭಗ್ನಗೊಳಿಸುವ ಅವಕಾಶವಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧದ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 21ರಂದು ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್ ಹೀಗಿದೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟರ್‌ಗಳಿಗೆ ಸ್ವರ್ಗವಾದರೆ ಇಲ್ಲಿ ಬೌಲಿಂಗ್ ನಡೆಸುವುದು ಬೌಲರ್‌ಗಳ ಪಾಲಿಗೆ ದುಃಸ್ವಪ್ನ. ಈ ಪಂದ್ಯದಲ್ಲಿ ಮತ್ತೊಮ್ಮೆ ರನ್ ಮಳೆ ಹರಿದುಬರುವ ನಿರೀಕ್ಷೆಯಿದೆ. ಬ್ಯಾಟರ್‌ಗಳು ಮಿಂಚಿದರು ಬೌಲಿಂಗ್ ವಿಭಾಗ ಇಲ್ಲಿ ಕಷ್ಟಪಡಲಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 190-210 ಆಗಿದೆ.
ಹವಾಮಾನ ವರದಿ: ಭಾನುವಾರ ಬೆಂಗಳೂರಿನಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನು ಉಷ್ಣಾಂಶ 23-32 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ.
ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್ (ವಿಕೆಟ್ ಕೀಪರ್), ವೇಯ್ನ್ ಪಾರ್ನೆಲ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್
ಗುಜರಾತ್ ಟೈಟನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದಾಸುನ್ ಶಾನಕ, ಮೊಹಮ್ಮದ್ ಶಮಿ, ಸಾಯಿ ಕಿಶೋರ್, ಮೋಹಿತ್ ಶರ್ಮಾ