IPL 2023: 'ಸೂರ್ಯ' ಪ್ರತಾಪಕ್ಕೆ ಆರ್‌ಸಿಬಿ ಸ್ತಬ್ಧ: ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮ!!
ಮುಂಬೈ ಇಂಡಿಯನ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಸೂರ್ಯಕುಮಾರ್ ಯಾದವ್ ಹಾಗೂ ನೆಹಾಲ್ ವಧೇರಾ ಸ್ಪೋಟಕ ಪ್ರದರ್ಶನ ನೀಡಿದ್ದು ಆರ್‌ಸಿಬಿ ತಂಡದ ಗೆಲುವಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಇನ್ನೂ 21 ಎಸೆತಗಳು ಬಾಕಿಯಿರುವಂತೆಯೇ ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲಿಗೆ ಇಶಾನ್ ಕಿಶನ್ ಸ್ಪೋಟಕ ಆರಂಭ ನೀಡಿದರು. 21 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿ ಇಶಾನ್ ವಿಕೆಟ್ ಕಳೆದುಕೊಂಡರು. ಬಳಿಕ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 7 ರನ್‌ಗಳಿಸಿ ರೋಹಿತ್ ವಿಕೆಟ್ ಕಳೆದುಕೊಂಡರು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ನೇಹಲ್ ವಧೇರಾ ಆರ್‌ಸಿಬಿ ಬೌಲಿಂಗ್ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿದರು.

ಬಹುತೇಕ ಗೆಲುವಿನ ಸನಿಹದವರೆಗೂ ತಂಡವನ್ನು ಮುನ್ನಡೆಸಿದ ಈ ಜೋಡಿ ಸೂರ್ಯಕುಮಾರ್ ಯಾದವ್ ಔಟಾಗುವ ಮೂಲಕ ಬೇರ್ಪಟ್ಟಿತು. ಈ ಸಂದರ್ಭದಲ್ಲಿ ಸೂರ್ಯ ಕೇವಲ 35 ಎಸೆತಗಳಲ್ಲಿ 83 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಆದರೆ ಅದಾದಗಲೇ ತಂಡ 192 ರನ್‌ಗಳನ್ನು ಗಳಿಸಿದ್ದು ಗೆಲುವಿಗೆ 8 ರನ್‌ಗಳು ಮಾತ್ರ ಅಗತ್ಯವಿತ್ತು. 237.14ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಧ್ವಂಸಗೈದರು.
ಇನ್ನು ಸೂರ್ಯಕುಮಾರ್ ಯಾದವ್‌ಗೆ ಅದ್ಭುತವಾಗಿ ಸಾಥ್ ನೀಡಿದ ನೇಹಲ್ ವಧೇರಾ ಅಜೇಯವಾಗಿಳಿದಿದ್ದು 34 ಎಸೆತಗಳಲ್ಲಿ 52 ರನ್ ಬಾರಿಸಿ ಅರ್ಧ ಶತಕ ಪೂರ್ಣಗೊಳಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಇನ್ನು ಈ ಸೋಲಿನಿಂದಿಗೆ ಆರ್‌ಸಿಬಿ ತಂಡದ ಪ್ಲೇಆಫ್‌ಗೇರುವ ಕನಸು ಈಗ ದುರ್ಗಮವಾಗಿದೆ. ಆರ್‌ಸಿಬಿ ತಂಡಕ್ಕೆ ಇನ್ನು ಮೂರು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಮೂರರಲ್ಲಿಯೂ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ವಿರಾಟ್ ಕೊಹ್ಲಿ ಮೊದಲ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡರೆ ಅನುಜ್ ರಾವತ್ 6 ರನ್‌ಗಳಿಸಿ ಔಟಾದರು. ಆದರೆ ನಂತರ ಜೊತೆಯಾದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ಸ್ಪೋಟಕ ಪ್ರದರ್ಶನ ನಿಡುತ್ತಾ ಅಬ್ಬರಿಸಿದರು. ಈ ಜೋಡಿ 61 ಎಸೆತಗಳಲ್ಲಿ ಬರೊಬ್ಬರಿ 120 ರನ್‌ಗಳ ಜೊತೆಯಾಟ ನೀಡಿ ನಿರ್ಗಮಿಸಿದರು.
33 ಎಸೆತಗಳನ್ನು ಎದುರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ 8 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿದ್ದು 68 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬಂದ ಲೋಮ್ರೋರ್ ಕೂಡ ಕೇವಲ ಒಂದು ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ನಾಯಕ ಫಾಫ್ ಡು ಪ್ಲೆಸಿಸ್ ಕೂಡ 41 ಎಸೆತಗಳಲ್ಲಿ 65 ರನ್‌ಗಳಿಸಿ ಔಟಾದರು. ಇನ್ನು ಈ ಪಂದ್ಯದಲ್ಲಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೆಳ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದರು. 18 ಎಸೆತಗಳಲ್ಲಿ 30 ರನ್ ಬಾರಿಸಿದ ಅವರು ತಂಡದ ಮೊತ್ತ 200ರ ಸನಿಹಕ್ಕೆ ತಲುಪಲು ಕಾರಣವಾದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಆರ್‌ಸಿಬಿ 199 ರನ್‌ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications