ಸದ್ಯ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ ನಡೆಯುತ್ತಿದ್ದು, ಮಾರ್ಚ್ 31ರಿಂದ ಆರಂಭವಾಗಿರುವ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಹತ್ತು ತಂಡಗಳು ಭಾಗವಹಿಸಿವೆ. 2019ರ ನಂತರ ತವರು ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.
2021ರಲ್ಲಿ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವ ಜವಾಬ್ದಾರಿ ತ್ಯಜಿಸಿದ ನಂತರ, ಡ್ರೆಸ್ಸಿಂಗ್ ರೂಮ್‌ನ ನಿಯಂತ್ರಣವನ್ನು ತೆಗೆದುಕೊಳ್ಳುವ ಅನುಭವಿ ಆಟಗಾರನನ್ನು ಪಡೆಯಲು ಫ್ರಾಂಚೈಸಿ ಯೋಚಿಸಿತು.

2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಬಿಡುಗಡೆ ಹೊಂದಿದ್ದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ರೂ.ಗೆ ಆರ್‌ಸಿಬಿ ಖರೀದಿಸಿತು. ನಂತರ, ಅವರನ್ನೇ ಆರ್‌ಸಿಬಿ ಫ್ರಾಂಚೈಸಿ ತಂಡದ ಮುಂದಿನ ನಾಯಕ ಎಂದು ನೇಮಿಸಲಾಯಿತು.
ಇದೀಗ ಎರಡು ವರ್ಷಗಳ ಬಳಿಕ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸುವ ನಿರ್ಧಾರದ ಹಿಂದಿನ ಕಾರಣವನ್ನು ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಬಹಿರಂಗಪಡಿಸಿದ್ದಾರೆ.
"ನಾವು ಆದರ್ಶಪ್ರಾಯವಾಗಿ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ವಹಿಸಿದ ಆಟಗಾರನೊಬ್ಬನ, ಭಾರತೀಯ ಆಟಗಾರರು ಮತ್ತು ಅಂತಾರಾಷ್ಟ್ರೀಯ ಆಟಗಾರರಿಂದ ಗೌರವವನ್ನು ಹೊಂದಿರುವ ವ್ಯಕ್ತಿಯನ್ನು ಬಯಸಿದ್ದೆವು. ಇದು ನಿಜವಾಗಿಯೂ ಅತಿ ಮುಖ್ಯವಾಗಿತ್ತು".

"ಯಾರೋ ಒಬ್ಬರು ಬಂದು ಒಂದು ವರ್ಷದ ಮಟ್ಟಿಗೆ ನಾಯಕನಾಗುವುದಲ್ಲ. ಆರ್‌ಸಿಬಿ ತಂಡದ ಖಾಯಂ ಆಗಿ ನೆಲೆಯೂರುವಂತಹ ಆಟಗಾರ ಬೇಕು ಎಂದು ನಾವು ಅಂದುಕೊಂಡಿದ್ದೆವು," ಎಂದು ಮೈಕ್ ಹೆಸ್ಸನ್ ಅವರು ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವಾಗ ತಿಳಿಸಿದರು.
ಫಾಫ್ ಡು ಪ್ಲೆಸಿಸ್ ಅವರಂತಹ ಆಟಗಾರನಲ್ಲಿ ಆರ್‌ಸಿಬಿ ಹುಡುಕುತ್ತಿರುವ ಗುಣಗಳನ್ನು ಕಂಡುಕೊಂಡೆವು. ಫಾಫ್ ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ. ಹೆಚ್ಚು ಮುಖ್ಯವಾಗಿ ಅಂತಾರಾಷ್ಟ್ರೀಯ ಮತ್ತು ಭಾರತೀಯ ಆಟಗಾರರಿಂದ ಅಪಾರ ಗೌರವವನ್ನು ಹೊಂದಿರುವ ವ್ಯಕ್ತಿ ಅವರಾಗಿದ್ದಾರೆ ಎಂದು ಮೈಕ್ ಹೆಸ್ಸನ್ ಪುನರುಚ್ಚರಿಸಿದರು.
"ನಮಗೆಲ್ಲರಿಗೂ ತಿಳಿದಿರುವ ಫಾಫ್ ಡು ಪ್ಲೆಸಿಸ್ ಪ್ರದರ್ಶನದ ದೃಷ್ಟಿಕೋನದಿಂದಲೂ ತಂಡದ ಶಕ್ತಿಯಾಗಬಲ್ಲರು ಎಂದು ಯೋಚಿಸಿದೆವು. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ದಾಖಲೆಯನ್ನು ಹೊಂದಿರುವ ಆಟಗಾರನನ್ನು ಹುಡುಕುತ್ತಿದ್ದಾಗ ಫಾಫ್ ಡು ಪ್ಲೆಸಿಸ್ ಕಣ್ಣಿಗೆ ಬಿದ್ದರು ಮತ್ತು ಸ್ಪಷ್ಟವಾಗಿ ಅವರು ಆ ಗುಣಗಳನ್ನು ಹೊಂದಿದ್ದರು".

"ಮುಖ್ಯ ಕೋಚ್ ಮತ್ತು ಕೋಚಿಂಗ್ ಸಿಬ್ಬಂದಿಯೊಂದಿಗೆ ಫಾಫ್ ಡು ಪ್ಲೆಸಿಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ನಾವು ಆತನಲ್ಲಿ ಅಂತಹ ಅಂತರ್ಗತ ಶೈಲಿಯನ್ನು ನೋಡಬಹುದು," ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದರು.
"ನಮ್ಮಲ್ಲಿ ಸಾಕಷ್ಟು ಉತ್ತಮ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅವರಂತವರು ಇದ್ದಾರೆ. ಇವರಿಗೆ ಸರಿಸಮಾನಾದ ಆಟಗಾರ ಬೇಕಾಗಿತ್ತು. ಕೇವಲ ಸರ್ವಾಧಿಕಾರಿ ಶೈಲಿಯ ನಾಯಕನಾಗುವುದಕ್ಕಿಂತ ಹೆಚ್ಚಾಗಿ ನಾಯಕತ್ವದ ಕೌಶಲ್ಯಗಳನ್ನು ಹೊಂದಿರುವ ಆಟಗಾರ ಬೇಕಿತ್ತು. ಹೀಗಾಗಿ ಫಾಫ್ ಡು ಪ್ಲೆಸಿಸ್ ಆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು," ಎಂದು ಮೈಕ್ ಹೆಸ್ಸನ್ ಹೇಳಿದರು.
ಗಮನಾರ್ಹವಾಗಿ, ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ತಂಡ 2022ರ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ದುರದೃಷ್ಟವಶಾತ್, ಕ್ವಾಲಿಫೈಯರ್ 2ರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತು.
2023ರ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ತಂಡ ಆಡಿದ ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲುವು ಸಾಧಿಸಲು ಯಶಸ್ವಿಯಾಗಿದೆ ಮತ್ತು ಅಂಕಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿದೆ.