IPL Mini Auction: ಮಾಜಿ ಆರ್‌ಸಿಬಿ ಸ್ಪಿನ್ನರ್ ಗುರಿಯಾಗಿಸಿಕೊಂಡ ಈ ಮೂರು ಫ್ರಾಂಚೈಸಿಗಳು

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೆ ನೋಂದಾಯಿಸಿದ 405 ಆಟಗಾರರಲ್ಲಿ ಆ್ಯಡಮ್ ಝಂಪಾ ಕೂಡ ಒಬ್ಬ ಪ್ರಮುಖ ಲೆಗ್-ಸ್ಪಿನ್ನರ್. ಇತ್ತೀಚಿನ ದಿನಗಳಲ್ಲಿ ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಝಂಪಾ ಅವರು ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಬಹು ಬೇಡಿಕೆಯ ಆಟಗಾರನಾಗಿದ್ದಾರೆ.
ಈಗಾಗಲೇ 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಐಪಿಎಲ್‌ನಲ್ಲಿ ಆಡಿರುವ ಆ್ಯಡಮ್ ಝಂಪಾ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಈ ವರ್ಷದ ಹರಾಜಿನಲ್ಲಿ ಅವರ ಮೂಲ ಬೆಲೆಯನ್ನು 1.50 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.
ನ್ಯೂ ಸೌತ್ ವೇಲ್ಸ್ ಬೌಲರ್ 14 ಐಪಿಎಲ್ ಪಂದ್ಯಗಳಲ್ಲಿ 7.74 ಎಕಾನಮಿ ದರದಲ್ಲಿ 21 ವಿಕೆಟ್ ಪಡೆದಿದ್ದಾರೆ. ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುಧಾರಿತ ಲೆಗ್-ಸ್ಪಿನ್ನರ್ ಆಗಿದ್ದಾರೆ ಮತ್ತು ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಲೆಗ್ ಸ್ಪಿನ್ನರ್‌ಗಳು ಯಶಸ್ವಿ ಟಿ20 ತಂಡದ ನಿರ್ಣಾಯಕ ಭಾಗವೆಂದು ಪರಿಗಣಿಸಲ್ಪಟ್ಟಿರುವುದರಿಂದ, 30 ವರ್ಷ ವಯಸ್ಸಿನ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಝಂಪಾಗೆ ಹೆಚ್ಚು ಬೇಡಿಕೆ ಇರಲಿದೆ. ಈ ಮೂರು ಐಪಿಎಲ್ ಫ್ರಾಂಚೈಸಿಗಳು ಆ್ಯಡಮ್ ಝಂಪಾರನ್ನು ಖರೀದಿಸಲು ಎದುರು ನೋಡುತ್ತಿವೆ.

ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಇಬ್ಬರು ಯಶಸ್ವಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ರಶೀದ್ ಖಾನ್ ಅವರನ್ನು ಕೈಬಿಟ್ಟ ನಂತರ ಅತ್ಯುತ್ತಮ ತಂಡವನ್ನು ಕಟ್ಟುವ ಪ್ರಯತ್ನದಲ್ಲಿದೆ. ಆಟಗಾರರ ನೀರಸ ಪ್ರದರ್ಶನದಿಂದ ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 14 ಪಂದ್ಯಗಳಲ್ಲಿ 6ರಲ್ಲಿ ಮಾತ್ರ ಗೆದ್ದಿದೆ.
ರಶೀದ್ ಖಾನ್ ನಿರ್ಗಮನದಿಂದ ಬೌಲಿಂಗ್ ವಿಭಾಗ ಮತ್ತಷ್ಟು ದುರ್ಬಲಗೊಂಡಿದೆ. ಬದಲಿ ಆಟಗಾರನ ಹುಡುಕಾಟದಲ್ಲಿರುವ 2016ರ ಚಾಂಪಿಯನ್ಸ್ ತಮ್ಮ ಗುರಿಯನ್ನು ಆ್ಯಡಮ್ ಝಂಪಾ ಕಡೆಗೆ ತಿರುಗಿಸಲಿದೆ.
ಲೆಗ್‌ಸ್ಪಿನ್ನರ್ ಆ್ಯಡಮ್ ಝಂಪಾ ಮಧ್ಯಮ ಓವರ್‌ಗಳಲ್ಲಿ ಎದುರಾಳಿಗಳನ್ನು ನಿಯಂತ್ರಿಸಬಲ್ಲ ಬೌಲರ್ ಆಗಿದ್ದಾರೆ ಮತ್ತು ನಿರ್ಣಾಯಕ ವಿಕೆಟ್ ಪಡೆಯಬಲ್ಲರಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಜೊತೆಗಿನ ಸ್ಪಿನ್ ಬೌಲಿಂಗ್ ಪಾಲುದಾರಿಕೆಯು ಸಕಾರಾತ್ಮಕ ಫಲಿತಾಂಶ ಒದಗಿಸಲಿದೆ ಎಂಬುದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಲೆಕ್ಕಾಚಾರವಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಬಲ ಹೆಚ್ಚಿಸುವರೇ ಆ್ಯಡಮ್ ಝಂಪಾ
ಕಳೆದ ಋತುವಿನಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿದೆ. ಪ್ರಮುಖ ಬೌಲರ್ ಜೋಫ್ರಾ ಆರ್ಚರ್ ನಿರಂತರ ಗಾಯದಿಂದ ತಂಡಕ್ಕೆ ಹಿನ್ನಡೆಯಾಗಿದೆ. ಐದು ಬಾರಿಯ ಚಾಂಪಿಯನ್ಸ್ ತಂಡದಲ್ಲಿ ಯಾವುದೇ ಸಮರ್ಥ ಬ್ಯಾಕ್‌ಅಪ್ ಬೌಲರ್‌ಗಳಿಲ್ಲದೆ ಆಡಿದ್ದರು.
ಮುಂಬೈ ಇಂಡಿಯನ್ಸ್ ತಂಡವು ಭಾರತೀಯ ಲೆಗ್ ಸ್ಪಿನ್ನರ್ ಜೊತೆಗೆ ಎರಡು ಸಾಗರೋತ್ತರ ಸ್ಪಿನ್ನರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಎದುರು ನೋಡುತ್ತಿದೆ. ಕಳೆದ ಋತುವಿನಲ್ಲಿ ಡೇನಿಯಲ್ ಸಾಮ್ಸ್ ಮತ್ತು ಮುರುಗನ್ ಅಶ್ವಿನ್/ಮಾಯಾಂಕ್ ಮಾರ್ಕಾಂಡೆ ಈ ಆಯಾ ಪಾತ್ರಗಳನ್ನು ತುಂಬಲು ನಂಬಿಕಸ್ಥ ಬೌಲರ್‌ಗಳಾಗಿದ್ದಾರೆ.
ಮಧ್ಯಮ ಓವರ್‌ಗಳಲ್ಲಿ ಸ್ವಲ್ಪ ನಿಯಂತ್ರಣವನ್ನು ಒದಗಿಸುವ ಬೌಲಿಂಗ್ ಆಯ್ಕೆಯ ಕೊರತೆಯನ್ನು ಮುಂಬೈ ಇಂಡಿಯನ್ಸ್ ಹೊಂದಿದ್ದು, ಆ್ಯಡಮ್ ಝಂಪಾ ಬಂದರೆ ಅದು ಕೊರತೆ ನೀಗಲಿದೆ ಮತ್ತು ವಿಕೆಟ್ ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತಾರೆ. ಜಸ್ಪ್ರೀತ್ ಬುಮ್ರಾ ಮತ್ತು ಉಳಿದ ಬೌಲರ್‌ಗಳ ಮೇಲೆ ಸ್ವಲ್ಪ ಹೊರೆ ಕಡಿಮೆಯಾಗಲಿದೆ.

ಸ್ಪೆಷಲಿಸ್ಟ್ ಲೆಗ್ ಸ್ಪಿನ್ನರ್ ಹುಡುಕಾಟದಲ್ಲಿ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ನಾಲ್ಕು ತಂಡಗಳಲ್ಲಿ ಒಂದಾಗಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಟಗಾರರು ಇತ್ತೀಚಿನ ದಿನಗಳಲ್ಲಿ ಸ್ಥಿರವಾದ ನೆಲೆಗೊಳ್ಳಲು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಋತುವಿನಲ್ಲಿ ಆಡಿದ್ದ ಬಹುತೇಕರನ್ನು ತಂಡ ಕೈಬಿಟ್ಟಿದೆ. ಮಿನಿ ಹರಾಜಿನಲ್ಲಿ ಸ್ಲಾಟ್‌ಗಳನ್ನು ಭರ್ತಿ ಮಾಡಲು ಹೆಚ್ಚಿನ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಪಂಜಾಬ್ ಕಿಂಗ್ಸ್ ಸದ್ಯ ಒಬ್ಬ ಸ್ಪೆಷಲಿಸ್ಟ್ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಅವರನ್ನು ಮಾತ್ರ ಹೊಂದಿದೆ. ಲಿಯಾಮ್ ಲಿವಿಂಗ್‌ಸ್ಟೋನ್‌ನಲ್ಲಿನ ಆಲ್‌ರೌಂಡರ್ ಆಯ್ಕೆಯು ಅಗತ್ಯವಿದ್ದರೆ ಬೌಲಿಂಗ್ ಮಾಡಿಸಬಹುದು. ಆದರೆ ತಂಡದ ಮ್ಯಾನೇಜ್‌ಮೆಂಟ್ ಕನಿಷ್ಠ ಇನ್ನೊಬ್ಬ ಸ್ಪೆಷಲಿಸ್ಟ್ ಲೆಗ್ ಸ್ಪಿನ್ನರ್‌ನೊಂದಿಗೆ ಐಪಿಎಲ್ ಪಂದ್ಯಾವಳಿ ಆಡಲು ಬಯಸುತ್ತಿದೆ. ಹೀಗಾಗಿ ಆ್ಯಡಮ್ ಝಂಪಾ ಮೇಲೆ ಕಣ್ಣಿಡುವ ಸಾಧ್ಯತೆ ಇದೆ.
ಆಡುವ 11ರ ಬಳಗದಲ್ಲಿ ಎಲ್ಲಾ ವಿದೇಶಿ ಆಯ್ಕೆಗಳಿಗೆ ಅವಕಾಶ ಕಲ್ಪಿಸುವುದು ತಂಡಕ್ಕೆ ಕಷ್ಟವಾಗಬಹುದು. ಹೀಗಾಗಿ ಈ ಬಾರಿ ಅವರು ತಮ್ಮ ಖರೀದಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ. ಆ್ಯಡಮ್ ಝಂಪಾ ಅವರು ಪಂಜಾಬ್ ಕಿಂಗ್ಸ್ ತಂಡದ ಭಾಗವಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications