IPL 2023: ಐಪಿಎಲ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂಎಸ್ ಧೋನಿ; ವರದಿ
ಸೋಮವಾರ (ಮೇ 29) ಮಧ್ಯರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಒಂದೆರಡು ದಿನಗಳಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಎಂಎಸ್ ಧೋನಿ ಐಪಿಎಲ್ 2023ರ ಟೂರ್ನಿಯುದ್ದಕ್ಕೂ ಮೊಣಕಾಲಿನ ಗಾಯದ ಜೊತೆಗೆ ಆಡಿದ್ದಾರೆ. ಹಲವು ವರದಿಗಳ ಪ್ರಕಾರ, ಧೋನಿ ತಮ್ಮ ಮೊಣಕಾಲಿನ ಗಾಯಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳಿಗಾಗಿ ಈ ವಾರ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್ 2023ರ ಸೀಸನ್‌ನ ಆರಂಭದಲ್ಲಿ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಮೊಣಕಾಲಿನ ಗಾಯದೊಂದಿಗೆ ಎಂಎಸ್ ಧೋನಿ ಟಿ20 ಲೀಗ್ ಆಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದರು.
"ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರ ಚಲನೆಗಳಲ್ಲಿ ನೀವು ನೋಡಬಹುದು. ಅದು ಅವರಿಗೆ ಸ್ವಲ್ಪಮಟ್ಟಿಗೆ ಅಡ್ಡಿಯಾಗುತ್ತಿದೆ. ಆದರೆ ಅವರ ಫಿಟ್ನೆಸ್ ತುಂಬಾ ವೃತ್ತಿಪರವಾಗಿದೆ," ಎಂದು ಸ್ಟೀಫನ್ ಫ್ಲೆಮಿಂಗ್ ಕಳೆದ ತಿಂಗಳು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಋತುವಿನ ಕೊನೆಯ ಲೀಗ್ ಪಂದ್ಯದ ನಂತರ ಎಂಎಸ್ ಧೋನಿ ಮೊಣಕಾಲಿನ ಮೇಲೆ ಐಸ್ ಪ್ಯಾಕ್‌ನೊಂದಿಗೆ ಚಿಕಿತ್ಸೆ ಪಡೆದುಕೊಂಡರು.
2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್‌ಕೆ ಗೆದ್ದ ನಂತರ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರೊಂದಿಗಿನ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಧೋನಿ ಗಾಯಗೊಂಡ ಮೊಣಕಾಲಿನ ಮೇಲೆ ಐಸ್ ಪ್ಯಾಕ್ ಪಟ್ಟಿ ಧರಿಸಿರುವುದನ್ನು ಕಾಣಬಹುದು.
ಪಂದ್ಯದ ನಂತರ ಇರ್ಫಾನ್ ಪಠಾಣ್ ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸಿ ಎಂಎಸ್ ಧೋನಿಯನ್ನು ಭೇಟಿಯಾದರು. ಮಾಜಿ ಸಹ ಆಟಗಾರರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದರು.
ಬಳಿಕ ಇರ್ಫಾನ್ ಪಠಾಣ್ ತಮ್ಮ ಈ ಫೋಟೋವನ್ನು ಹಂಚಿಕೊಂಡಿದ್ದರು ಮತ್ತು ಅದರ ಶೀರ್ಷಿಕೆ ಹೀಗಿದೆ, "ಜಹಾ ಸೆ ಚೋರ್ಟೆ ಹೈ ವಹೀ ಸೆ ಫಿರ್ ಸೆ ಶುರು ಹೋತಿ ಹೈ ಹಮಾರಿ ದೋಸ್ತಿ. ನಾವು ಭೇಟಿಯಾದ ಸಮಯ, ನಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳದ ಸಮಯ. ನಾವು ಭೇಟಿಯಾದಾಗಲೆಲ್ಲಾ ಜೀವನದ ಕೆಲವು ತಮಾಷೆಯ ನೆನಪುಗಳು ಮೆಲುಕು ಹಾಕುತ್ತೇವೆ," ಎಂದು ಬರೆದುಕೊಂಡಿದ್ದಾರೆ.
ಸಿಎಸ್‌ಕೆ ಐಪಿಎಲ್ 2023ರ ಪ್ರಶಸ್ತಿಯನ್ನು ಗೆದ್ದ ನಂತರ ಎಂಎಸ್ ಧೋನಿ ಅವರು 2024ರ ಐಪಿಎಲ್‌ನಲ್ಲಿ ಫ್ರಾಂಚೈಸಿಯೊಂದಿಗೆ ಮುಂದುವರಿಯಲು ಬಯಸುತ್ತೇನೆ ಎಂದು ಈಗಾಗಲೇ ಖಚಿತಪಡಿಸಿದ್ದಾರೆ.
"ನೀವು ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿಯನ್ನು ಘೋಷಿಸಲು ಇದು ಉತ್ತಮ ಸಮಯ. ಸದ್ಯ ನಾನು ಹೇಳಲು ಸುಲಭವಾದ ವಿಷಯವೆಂದರೆ ಧನ್ಯವಾದ," ಎಂದು ಎಂಎಸ್ ಧೋನಿ ಪಂದ್ಯದ ನಂತರದ ಹೇಳಿದರು.
"ಇನ್ನೂ ಒಂಬತ್ತು ತಿಂಗಳ ಕಾಲ ಕಷ್ಟಪಟ್ಟು ಅಭ್ಯಾಸ ಮಾಡುವುದು ಮತ್ತು ಇನ್ನೊಂದು ಐಪಿಎಲ್ ಸೀಸನ್ ಆಡಲು ಪ್ರಯತ್ನಿಸುವುದು ಕಷ್ಟದ ಕೆಲಸ. ಮನಸ್ಸು ಆಸೆಪಟ್ಟರೂ ದೇಹವನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಆದರೆ ಸಿಎಸ್‌ಕೆ ಅಭಿಮಾನಿಗಳಿಂದ ನನಗೆ ಸಿಕ್ಕಿರುವ ಪ್ರೀತಿ ಉತ್ತಮವಾಗಿದೆ".
"ಇನ್ನೊಂದು ಸೀಸನ್ ಆಡಲು ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿದ್ದೇನೆ. ಅವರು ತಮ್ಮ ಪ್ರೀತಿ ಮತ್ತು ಭಾವನೆಯನ್ನು ತೋರಿದ ರೀತಿಗೆ ನಾನು ಅವರಿಗಾಗಿ ಮಾಡಬೇಕಾದ ಕೆಲಸವಾಗಿದೆ," ಎಂದು ಎಂಎಸ್ ಧೋನಿ ನಿವೃತ್ತಿ ಯೋಚನೆ ಬಗ್ಗೆ ಸ್ಪಷ್ಟಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications