
ಇಂದು ( ಏಪ್ರಿಲ್ 24 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 34ನೇ ಪಂದ್ಯ ಜರುಗಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ವಿರುದ್ಧ 7 ರನ್‌ಗಳ ರೋಚಕ ಜಯವನ್ನು ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿದ್ದು, ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 145 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಲಷ್ಟೇ ಶಕ್ತವಾಗಿದೆ. ಈ ಮೂಲಕ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ಕೈಚೆಲ್ಲಿದ್ದು, ತವರಿನಲ್ಲಿಯೇ ಸೋತು ಮುಖಭಂಗ ಅನುಭವಿಸಿದೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಎದುರು ರನ್ ಗಳಿಸಲು ತಿಣುಕಾಡಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್ ಹಾಗೂ ಫಿಲಿಪ್ ಸಾಲ್ಟ್ ಕಣಕ್ಕಿಳಿದರು. ಈ ಪೈಕಿ ಫಿಲಿಪ್ ಸಾಲ್ಟ್ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತ ಅನುಭವಿಸಿತು.
ಡೇವಿಡ್ ವಾರ್ನರ್ 21 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 25 ರನ್, ಶರ್ಘರಾಜ್ ಖಾನ್ 10 ರನ್, ಮನೀಶ್ ಪಾಂಡೆ 34 ರನ್, ಅಮನ್ ಹಕೀಮ್ ಖಾನ್ 4 ರನ್, ಅಕ್ಷರ್ ಪಟೇಲ್ 34 ರನ್, ಅನ್ರಿಚ್ ನಾರ್ಕಿಯಾ 2 ರನ್, ಕುಲ್‌ದೀಪ್ ಯಾದವ್ ಅಜೇಯ 4 ರನ್ ಹಾಗೂ ಇಶಾಂತ್ ಶರ್ಮಾ ಅಜೇಯ 1 ರನ್ ಕಲೆಹಾಕಿದರು. ಸನ್ ರೈಸರ್ಸ್ ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್, ಭುವನೇಶ್ವರ್ ಕುಮಾರ್ ೨ ವಿಕೆಟ್ ಹಾಗೂ ನಟರಾಜನ್ ಒಂದು ವಿಕೆಟ್ ಪಡೆದರು.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ಸಹ ರನ್ ಗಳಿಸಲು ಪರದಾಡಿತು. ತಂಡದ ಪರ ಹ್ಯಾರಿ ಬ್ರೂಕ್ 7 ರನ್, ಮಯಾಂಕ್ ಅಗರ್ವಾಲ್ 49, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5, ಏಡನ್ ಮಾರ್ಕ್ರಮ್ 3, ಹೈನ್ರಿಚ್ ಕ್ಲಾಸೆನ್ 31, ವಾಷಿಂಗ್ಟನ್ ಸುಂದರ್ ಅಜೇಯ 24 ರನ್ ಹಾಗೂ ಮಾರ್ಕೊ ಜಾನ್‌ಸೆನ್ ಅಜೇಯ 2 ರನ್ ಗಳಿಸಿದರು.
ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಸೇರಿದಂತೆ ಮಧ್ಯಮ ಕ್ರಮಾಂಕದ ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ ಹಾಗೂ ಏಡನ್ ಮಾರ್ಕ್ರಮ್ ಎಲ್ಲರೂ ಸಹ ಕೈಕೊಟ್ಟರು. ಆದರೂ ಮಯಾಂಕ್ ಅಗರ್ವಾಲ್ ಆಟ ತಂಡವನ್ನು ಗೆಲುವಿನತ್ತ ಸಾಗುವಂತೆ ಮಾಡಿತ್ತು. ಹೈನ್ರಿಚ್ ಕ್ಲಾಸೆನ್ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ ತಂಡವನ್ನು 18 ಅಥವಾ 19ನೇ ಓವರ್‌ನಲ್ಲಿ ಗೆಲ್ಲಿಸಲಿದ್ದಾರೆ ಎಂದು ಊಹಿಸಲಾಯಿತು.
ಆದರೆ ಪಂದ್ಯ ಕೊನೆಯ ಓವರ್‌ಗೂ ತಲುಪಿತು. ಸ್ಪೋಟಕ ಆಟವಾಡ್ತಿದ್ದ ಹೈನ್ರಿಚ್ ಕ್ಲಾಸೆನ್ 19ನೇ ಓವರ್‌ನಲ್ಲಿ ಔಟ್ ಆದ ಬಳಿಕ ಅದೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಅಂತಿಮವಾಗಿ 6 ಎಸೆತಗಳಲ್ಲಿ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ನಾಯಕ ವಾರ್ನರ್ ಚೆಂಡನ್ನು ಇಂಪ್ಯಾಕ್ಟ್ ಪ್ಲೇಯರ್ ಮುಕೇಶ್ ಕುಮಾರ್‌ಗೆ ನೀಡಿದರು.
18ನೇ ಓವರ್ ಬೌಲಿಂಗ್ ಮಾಡಿದಾಗ 15 ರನ್ ನೀಡಿ ದುಬಾರಿಯಾಗಿದ್ದ ಮುಕೇಶ್ ಕುಮಾರ್‌ಗೆ ಕೊನೆಯ ಒತ್ತಡದ ಓವರ್ ಮಾಡಲು ವಾರ್ನರ್ ಚೆಂಡನ್ನು ನೀಡಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಚೆನ್ನಾಗಿ ಬೌಲಿಂಗ್ ಮಾಡಿದ್ದ ಅನುಭವಿ ಇಶಾಂತ್ ಶರ್ಮಾ ಅವರದ್ದು ಇನ್ನೂ ಒಂದು ಓವರ್ ಬಾಕಿ ಇದ್ದರೂ ವಾರ್ನರ್ ಮುಕೇಶ್‌ಗೆ ಯಾಕೆ ಓವರ್ ಕೊಟ್ಟರು ಎಂದು ಬಹುತೇಕರು ಬೇಸರ ವ್ಯಕ್ತಪಡಿಸಿದರು.
ಆದರೆ ವಾರ್ನರ್ ಯೋಜನೆ ಕೆಲಸ ಮಾಡಿತು. ಕೊನೆಯ ಓವರ್‌ನ ಮೊದಲ ಎಸೆತವನ್ನು ಮುಕೇಶ್ ನೆಲಕಚ್ಚಿ ನಿಂತು ದೊಡ್ಡ ಹೊಡೆತ ಬಾರಿಸಲು ಕಾಯುತ್ತಿದ್ದ ಸುಂದರ್‌ಗೆ ಹಾಕಿ ಕೇವಲ 2 ರನ್ ನೀಡಿದರು. ಬಳಿಕ ಎರಡನೇ ಎಸೆತದಲ್ಲಿ ಸುಂದರ್ ಕೈನಲ್ಲಿ ಎದುರಿಸಲಾಗದಂತಹ ಭರ್ಜರಿ ಯಾರ್ಕರ್ ಎಸೆದು ಯಾವುದೆ ರನ್ ನೀಡದೇ ಉಳಿದರು. ಕೊನೆಗೆ ಮೂರು, ನಾಲ್ಕು ಹಾಗೂ ಐದನೇ ಎಸೆತಗಳಲ್ಲಿ ತಲಾ ಒಂದೊಂದು ರನ್ ನೀಡಿದ ಮುಕೇಶ್ ಕೊನೆಯ ಎಸೆತವನ್ನೂ ಸಹ ಡಾಟ್ ಬಾಲ್ ಹಾಕಿದರು. ಈ ಮೂಲಕ ಕೊನೆಯ ಅಮೂಲ್ಯ ಓವರ್‌ನಲ್ಲಿ ಮುಕೇಶ್ ಕೇವಲ 5 ರನ್ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅನ್ರಿಚ್ ನಾರ್ಕಿಯಾ ಹಾಗೂ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರೆ, ಕುಲ್‌ದೀಪ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.