MI vs PBKS: ಇಶಾನ್ ಕಿಶನ್, ಸೂರ್ಯಕುಮಾರ್ ಪರಾಕ್ರಮ; 215 ಚೇಸ್ ಮಾಡಿದ ಮುಂಬೈ!

ಇಂದು ( ಮೇ 3 ) ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿದೆ.
ಈ ಮೂಲಕ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಸೇಡನ್ನು ತೀರಿಸಿಕೊಂಡಿದೆ. ಅಲ್ಲದೇ ಮೊಹಾಲಿಯಲ್ಲಿ 200ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ಅನ್ನು ಬಾರಿಸಿದ ತಂಡ ಎಂಬ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಬರೆದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡಿದ್ದು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 214 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಮುಂಬೈ ಇಂಡಿಯನ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿ 6 ವಿಕೆಟ್‌ಗಳಿಂದ ಜಯ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಕಣಕ್ಕಿಳಿದರು. ಪ್ರಭ್‌ಸಿಮ್ರಾನ್ ಸಿಂಗ್ 9 ರನ್ ಗಳಿಸಿ ಔಟ್ ಆದರೆ, ಶಿಖರ್ ಧವನ್ 20 ಎಸೆತಗಳಲ್ಲಿ 30 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಶಾರ್ಟ್ 26 ಎಸೆತಗಳಲ್ಲಿ 27 ರನ್ ಗಳಿಸಿದರು.
ಮೂರು ವಿಕೆಟ್‌ಗಳ ಬಳಿಕ ಒಂದಾದ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಜೋಡಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಕಂಟಕವಾದರು. 119 ರನ್‌ಗಳ ಜತೆಯಾಟವಾಡಿದ ಈ ಜೋಡಿ ವಿಕೆಟ್ ಕಳೆದುಕೊಳ್ಳದೇ ಅಬ್ಬರದ ಆಟವನ್ನಾಡಿತು.
ಲಿಯಾಮ್ ಲಿವಿಂಗ್‌ಸ್ಟನ್ 42 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರೆ, ಜಿತೇಶ್ ಶರ್ಮಾ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 49 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪಿಯೂಷ್ ಚಾವ್ಲಾ 2 ವಿಕೆಟ್ ಪಡೆದರೆ, ಅರ್ಷದ್ ಖಾನ್ ಒಂದು ವಿಕೆಟ್ ಪಡೆದರು. ಆದರೆ ಚಾವ್ಲಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳೂ ಸಹ ದುಬಾರಿಯಾದರು. ಅದರಲ್ಲಿಯೂ ಜೋಫ್ರಾ ಆರ್ಚರ್ 4 ಓವರ್ ಮಾಡಿ 56 ರನ್ ನೀಡಿ ಕಳಪೆಯಾದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ಪಂಜಾಬ್ ಕಿಂಗ್ಸ್ ತಂಡ ನೀಡಿದ ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ರೋಹಿತ್ ಶರ್ಮಾ 3 ಎಸೆತಗಳಲ್ಲಿ ಡಕ್ ಔಟ್ ಆದರು. ಆದರೆ ಇಶಾನ್ ಕಿಶನ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 75 ರನ್ ಚಚ್ಚಿ ಅಬ್ಬರಿಸಿದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಮರೂನ್ ಗ್ರೀನ್ 18 ಎಸೆತಗಳಲ್ಲಿ 23 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 66 ರನ್ ಬಾರಿಸಿದರು. ಅಂತಿಮವಾಗಿ ಟಿಮ್ ಡೇವಿಡ್ 10 ಎಸೆತಗಳಲ್ಲಿ ಅಜೇಯ 19 ರನ್ ಹಾಗೂ ತಿಲಕ್ ವರ್ಮಾ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 26 ರನ್ ಚಚ್ಚಿದರು. ಅರ್ಷ್‌ದೀಪ್ ಸಿಂಗ್ ಎಸೆದ 19ನೇ ಓವರ್‌ನ ಐದನೇ ಎಸೆತದಲ್ಲಿ 102 ಮೀಟರ್ ಸಿಕ್ಸರ್ ಬಾರಿಸಿದ ತಿಲಕ್ ವರ್ಮಾ ವಿನ್ನಿಂಗ್ ಶಾಟ್ ಚಚ್ಚಿದರು.
ಪಂಜಾಬ್ ಕಿಂಗ್ಸ್ ಪರ ನಾಥನ್ ಎಲ್ಲಿಸ್ ಎರಡು ವಿಕೆಟ್ ಪಡೆದರೆ, ಅರ್ಷ್‌ದೀಪ್ ಸಿಂಗ್ ಹಾಗೂ ರಿಷಿ ಧವನ್ ತಲಾ ಒಂದೊಂದು ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್‌ನ ಎಲ್ಲಾ ಬೌಲರ್‌ಗಳೂ ಸಹ ದುಬಾರಿಯಾದರು. ಅದರಲ್ಲಿಯೂ ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೀರೊ ಆಗಿದ್ದ ಅರ್ಷ್‌ದೀಪ್ ಸಿಂಗ್ 3.5 ಓವರ್‌ಗಳಲ್ಲಿ 66 ರನ್ ನೀಡಿ ಅತಿಕೆಟ್ಟ ಪ್ರದರ್ಶನ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications