
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದ ಆಟಗಾರರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವುದಿಲ್ಲ ಎಂಬ ಆಪಾದನೆ ಈ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕರ್ನಾಟಕ ನೆಲದ ಆಟಗಾರರನ್ನು ಆಕ್ಷನ್‌ನಲ್ಲಿ ಖರೀದಿಸುವುದಿಲ್ಲ, ಕನ್ನಡಿಗರು ಆಕ್ಷನ್‌ಗೆ ಬಂದಾಗ ಬಿಡ್ ಮಾಡದೇ ಸುಮ್ಮನಿರುತ್ತೆ ಎಂಬೆಲ್ಲಾ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿಬಂದಿವೆ.
ಇನ್ನು ತಂಡದಲ್ಲಿ ಇದ್ದ ಕರ್ನಾಟಕದ ಆಟಗಾರರನ್ನೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೇನ್ ಮಾಡಿಕೊಳ್ಳದ ಕಾರಣ ಇದೀಗ ಕರ್ನಾಟಕದ ಅನೇಕ ಪ್ರಖ್ಯಾತ ಆಟಗಾರರು ಬೇರೆ ಫ್ರಾಂಚೈಸಿಗಳ ಪರ ಆಡುತ್ತಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಮ್ಮ ನೆಲದ ಆಟಗಾರರೇ ಇಲ್ಲ, ನಾವೇಕೆ ಆರ್‌ಸಿಬಿಗೆ ಸಪೋರ್ಟ್ ಮಾ ಆಡಬೇಕು ಎಂದು ಫ್ರಾಂಚೈಸಿಯ ನಡೆಗೆ ಬೇಸರ ವ್ಯಕ್ತಪಡಿಸುವವರೂ ಸಹ ಇದ್ದಾರೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಅಂತಹ ಆಪಾದನೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಜಯ್‌ಕುಮಾರ್ ವೈಶಾಖ್ ಎಂಬ ಬೌಲರ್ ಹೊರತುಪಡಿಸಿ ಬೇರೆ ಕನ್ನಡದ ಆಟಗಾರರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಹೆಸರಿಗೆ ಮಾತ್ರ ಬೆಂಗಳೂರಿನ ತಂಡ ಆದರೆ ಕರ್ನಾಟಕದ ಆಟಗಾರರೇ ಇಲ್ಲ ಎಂದು ಹಲವು ಕನ್ನಡ ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದ್ದರು.
ಅಂತಹ ಕ್ರಿಕೆಟ್ ಪ್ರೇಮಿಗಳು ನಿನ್ನೆ ( ಏಪ್ರಿಲ್ 25 ) ನಡೆದ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮತ್ತಷ್ಟು ಟ್ರೋಲ್ ಮಾಡಿದ್ದಾರೆ. ಹೌದು, ಈ ಪ೦ದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ದ ಬೆಂಗಳೂರಿನ ಕ್ರಿಕೆಟಿಗ ಅಬ್ಬರದ ಬ್ಯಾಟಿಂಗ್ ನಡೆಸಿದ್ದನ್ನು ಕಂಡ ಕನ್ನಡಿಗರು ಇಂತಹ ಆಟಗಾರನನ್ನು ಖರೀದಿಸಲು ಆಗಲ್ವಾ ಎಂದು ಕಿಡಿಕಾರಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಪರ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ಅಭಿನವ್ ಮನೋಹರ್ 21 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ ಸೇರಿದಂತೆ 42 ರನ್ ಚಚ್ಚಿ ಅಂತಿಮ ಹಂತದಲ್ಲಿ ತಂಡದ ರನ್ ವೇಗ ಹೆಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೀಗೆ ಅಬ್ಬರದ ಇನ್ನಿಂಗ್ಸ್ ಆಡಿದ ಕನ್ನಡಿಗ ಅಭಿನವ್ ಮನೋಹರ್ ಅವರನ್ನು ಖರೀದಿಸಬಹುದಿತ್ತು ಎಂದು ಕನ್ನಡಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದಾರೆ. 3.40 ಕೋಟಿ ಕೊಟ್ಟು ಅನುಜ್ ರಾವತ್ ಅವರನ್ನು ಖರೀದಿಸಿದ್ದೀರ, ಮಹಿಪಾಲ್ ಲೊಮ್ರೊರ್ ಅವರನ್ನು ರಿಟೇನ್ ಮಾಡಿಕೊಂಡಿದ್ದೀರ. ಈ ಇಬ್ಬರು ಆಟಗಾರರೂ ಆಡದಂತಹ ಇನ್ನಿಂಗ್ಸ್ ಅನ್ನು ಅಭಿನವ್ ಮನೋಹರ್ ಆಡಿದ್ದಾರೆ, ಅದೂ ಸಹ ಆತನನ್ನು ಗುಜರಾತ್ ಟೈಟನ್ಸ್ ಖರೀದಿಸಿದ್ದು 2.60 ಕೋಟಿಗೆ ಮಾತ್ರ.
ನೀವು ಇದಕ್ಕಿಂತ ಹೆಚ್ಚಿನ ಹಣವನ್ನು ಸುರಿದು ಖರೀದಿಸಿರುವ ಆಟಗಾರರು ಒಮ್ಮೆಯೂ ಈತ ನಿನ್ನೆ ನೀಡಿದಂತಹ ಪ್ರದರ್ಶನವನ್ನು ನೀಡಿಲ್ಲ, ನಮ್ಮ ನೆಲದ ಇಂತಹ ಪ್ರತಿಭೆಗಳನ್ನು ಗುರುತಿಸಿ ಖರೀದಿಸದ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್‌ಗಳ ಮೂಲಕ ಕಿಡಿಕಾರಿದ್ದಾರೆ. ಇನ್ನು 28 ವರ್ಷ ವಯಸ್ಸಿನ ಆಟಗಾರ ಅಭಿನವ್ ಮನೋಹರ್ ಬೆಂಗಳೂರಿವರಾಗಿದ್ದು, ಕಳೆದ ಬಾರಿಯ ಸೀಸನ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.