
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ನಿತೀಶ್ ರಾಣಾ ಅವರನ್ನು ನೂತನ ನಾಯಕನನ್ನಾಗಿ ನೇಮಕಗೊಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಖಾಯಂ ನಾಯಕ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಗೂ ಮುನ್ನ ಗಾಯಗೊಂಡಿದ್ದು ಐಪಿಎಲ್ ಆವೃತ್ತಿಗೆ ಅಲಭ್ಯವಾಗಲಿದ್ದಾರೆ. ಹೀಗಾಗಿ ನೂತನ ನಾಯಕನನ್ನು ನೇಮಕಗೊಳಿಸುವುದು ಕೆಕೆಆರ್‌ಗೆ ಅನಿವಾರ್ಯವಾಗಿತ್ತು.
ಇನ್ನು ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್‌ನಲ್ಲಿ ಮುಂದಿಉನ ಹಂತದಲ್ಲಿ ಲಭ್ತವಾಗುವ ಬಗ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಭರವಸೆ ವ್ಯಕ್ತಪಡಿಸಿದೆ. ಅವರು ಗಾಯದಿಂದ ಚೇತರಿಕೆ ಕಂಡು ಈ ಆವೃತ್ತಿಯಲ್ಲಿ ಕಣಕ್ಕಿಳಿಯಲೂ ಬಹುದು ಎಂದು ವಿಶ್ವಾಸಹೊಂದಿದೆ.
ಇನ್ನು 29ರ ಹರೆಯದ ನಿತೀಶ್ ರಾಣಾ, ದೇಶೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡದ ಪರವಾಗಿ 74 ಪಂದ್ಯಗಳನ್ನು ಆಡಿದ್ದು 135.61ರ ಸ್ಟ್ರೈಕ್‌ರೇಟ್‌ನಲ್ಲಿ 1744 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಅವರನ್ನು ನಾಯಕನನ್ನಾಗಿ ನೇಮಕಗೊಳಿಸುವ ಸಾಧ್ಯತೆಗಳು ಇದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ನಾಯಕನಾಗಿ ಸುನಿಲ್ ನರೈನ್ ಯಶಸ್ಸು ಸಾಧಿಸದ ಕಾರಣ ಹೊಸ ಆಯ್ಕೆಯತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಚಿತ್ತ ನೆಟ್ಟಿರುವ ಸಾಧ್ಯತೆಯಿದೆ.
ಐಎಲ್‌ಟಿ20 ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವದ ಅಬುದಾಬಿ ನೈಟ್ ರೈಡರ್ಸ್ ತಂಡವನ್ನು ಕಳೆದ ಆವೃತ್ತಿಯಲ್ಲಿ ಸುನಿಲ್ ನರೈನ್ ಮುನ್ನಡೆಸಿದ್ದರು. ಆದರೆ ಈ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಸುನಿಲ್ ನರೈನ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ ಎರಡು ಗೆಲುವುಗಳನ್ನು ಮಾತ್ರವೇ ಕಂಡಿದ್ದು 8 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ನರೈನ್‌ಗೆ ನಾಯಕತ್ವದ ಜವಾಬ್ಧಾರಿ ನೀಡುವ ನಿರ್ಧಾರ ಮಾಡದಿರಲು ಕೆಕೆಆರ್ ನಿರ್ಧರಿಸಿದೆ.
ಇನ್ನು ಸುನಿಲ್ ನರೈನ್ ಮಾತ್ರವಲ್ಲದೆ, ಕೆಕೆಆರ್ ತಂಡದ ನಾಯಕನ ರೇಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಇನ್ನೊಬ್ಬ ಆಲ್‌ರೌಂಡರ್ ಆಂಡ್ರೆ ರಸೆಲ್ ಕೂಡ ಇದ್ದರು. ಬಹು ವರ್ಷಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡುತ್ತಿರುವ ಆಂಡ್ರೆ ರಸೆಲ್ ನಾಯಕನ ಸ್ಥಾನಕ್ಕೆ ಸೂಕ್ತ ಆಟಗಾರ ಎನಿಸಿದ್ದರು ಆದರೆ ಈ ಎರಡು ಆಯ್ಕೆಯನ್ನು ಕೂಡ ಬಿಟ್ಟು ಭಾರತದ ಯುವ ಆಟಗಾರನ ಮೇಲೆ ಕೆಕೆಆರ್ ಭರವಸೆಯಿಟ್ಟಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್(ಗಾಯದಿಂದ ಅಲಭ್ಯ), ನಿತೀಶ್ ರಾಣಾ(ನಾಯಕ), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್, ನಾರಾಯಣ್ ಜಗದೀಸನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್.