
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೋವಿಡ್ -19 ರೋಗದ ನಂತರ ಮೊದಲ ಬಾರಿಗೆ ತನ್ನ ಮೂಲ ತವರಿನ ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.
ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ 2023ರ ಋತುವಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಹೊಸದೇನಲ್ಲ. ದಶಕದ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅದರ ನಂತರ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಈಗಾಗಲೇ ನೂರಾರು ಆಟಗಾರರು ಬಂದು ಹೋಗಿದ್ದಾರೆ. ಐಪಿಎಲ್‌ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ ಉದಾಹರಣೆಗಳು ಇವೆ.

ಇದೀಗ ಅನಿಲ್ ಕುಂಬ್ಳೆ ಅವರು ವೆಸ್ಟ್ ಇಂಡೀಸ್‌ನ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ಐಪಿಎಲ್ ಇತಿಹಾಸದಲ್ಲಿ 'ಸಾರ್ವಕಾಲಿಕ ಶ್ರೇಷ್ಠ' ಎಂದು ಆಯ್ಕೆ ಮಾಡಿದ್ದಾರೆ. ಕ್ರಿಸ್ ಗೇಲ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಹೊಗಳಿದ ಅನಿಲ್ ಕುಂಬ್ಳೆ, ಆತ ಯಾವುದೇ ಪಂದ್ಯವನ್ನು ಬದಲಾಯಿಸಬಲ್ಲ ಬ್ಯಾಟ್ಸ್‌ಮನ್ ಎಂದರು.
"ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಅನೇಕ ಹೆಸರುಗಳಿದ್ದು, ಕೇವಲ ಒಂದನ್ನು ಆಯ್ಕೆ ಮಾಡುವುದು ಕಷ್ಟ. ನಾನು ಖಂಡಿತವಾಗಿಯೂ ಹಿಂತಿರುಗಿ ನೋಡುತ್ತೇನೆ ಮತ್ತು ಬಹುಶಃ ಕ್ರಿಸ್ ಗೇಲ್ ಅವರನ್ನು ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಬಲ್ಲೆ," ಎಂದರು.
"ಕ್ರಿಸ್ ಗೇಲ್ ಅವರು ಆಟಗಾರನಾಗಿ ಬಂದ ರೀತಿ, ಆರ್‌ಸಿಬಿ ತಂಡಕ್ಕಾಗಿ ಅಷ್ಟು ವರ್ಷ ಆಡಿದ ರೀತಿ ಮತ್ತು ಕ್ರಿಸ್ ಗೇಲ್ ಹೇಗೆ ಸಂಪೂರ್ಣ ಪವರ್‌ಪ್ಲೇ ಓವರ್‌ಗಳನ್ನು ಆವರಿಸಿಕೊಳ್ಳುತ್ತಿದ್ದರು ಎಂಬುದನ್ನು ನೋಡಿದ್ದೇವೆ," ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಐಪಿಎಲ್‌ನ ಹೊಸ ಋತುವಿಗೆ ಮುಂಚಿತವಾಗಿ ಜಿಯೋ ಸಿನಿಮಾದ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

ಕ್ರಿಸ್ ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 142 ಪಂದ್ಯಗಳನ್ನು ಆಡಿದ್ದು, 39.72ರ ಸರಾಸರಿಯೊಂದಿಗೆ 4965 ರನ್ ಗಳಿಸಿದ್ದಾರೆ. ಗೇಲ್ 6 ಶತಕಗಳು ಮತ್ತು 31 ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ. ಕ್ರಿಸ್ ಗೇಲ್ ಅವರ ಗರಿಷ್ಠ ಐಪಿಎಲ್ ಸ್ಕೋರ್ ಅಜೇಯ 175 ರನ್ ಆಗಿದೆ. ಬೌಲಿಂಗ್‌ನಲ್ಲಿ 18 ವಿಕೆಟ್ ಸಹ ಪಡೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಜಿಯೋ ಸಿನಿಮಾದ 'ಮೈ ಟೈಮ್ ವಿತ್ ವಿರಾಟ್' ಸಂಚಿಕೆಯಲ್ಲಿ, ಕ್ರಿಸ್ ಗೇಲ್ ಅವರು ವಿರಾಟ್ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಹಲವಾರು ಬಾರಿ ಶತಕದ ಪಾಲುದಾರಿಕೆಗಳನ್ನು ಗಳಿಸಿದ್ದನ್ನು ಮತ್ತು ಮೈದಾನದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಆಟ, ಓಟ ಮತ್ತು ನೃತ್ಯದ ಬಗ್ಗೆಯೂ ಮಾತನಾಡಿದರು.
"ವಿರಾಟ್ ಕೊಹ್ಲಿ ಮತ್ತು ಇತರ ಆಟಗರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೇನೆ. ಒಮ್ಮೆ ನಾನು ಡ್ರೆಸ್ಸಿಂಗ್ ರೂಮ್‌ಗೆ ಬಂದರೆ, ನಾನು ಯಾವಾಗಲೂ ತಮಾಷೆಯಾಗಿರುತ್ತೇನೆ ಮತ್ತು ಬಹಳಷ್ಟು ಮೋಜು, ನೃತ್ಯ ಮತ್ತು ಎಲ್ಲವನ್ನೂ ಮಾಡುತ್ತೇನೆ," ಎಂದು ಆರ್‌ಸಿಬಿ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಹೇಳಿದ್ದರು.