
ಇಂದು ( ಏಪ್ರಿಲ್ 30 ) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್‌ಗಳ ರೋಚಕ ಗೆಲುವನ್ನು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಡಿವಾನ್ ಕಾನ್ವೆ ಅಬ್ಬರದ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 201 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಕೊನೆಯ ಎಸೆತದವರೆಗೂ ಹೋರಾಡಿ ಬೆನ್ನತ್ತಿದ ಪಂಜಾಬ್ ಕಿಂಗ್ಸ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕರಾಗಿ ಡಿವಾನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದರು. ರುತುರಾಜ್ ಗಾಯಕ್ವಾಡ್ 31 ಎಸೆತಗಳಲ್ಲಿ 39 ರನ್ ಗಳಿಸಿದರೆ, ಡಿವಾನ್ ಕಾನ್ವೆ 52 ಎಸೆತಗಳಲ್ಲಿ ಅಜೇಯ 92 ರನ್ ಗಳಿಸಿದರು. ಕೊನೆಯ ಓವರ್‌ವರೆಗೂ ಕಣದಲ್ಲಿದ್ದ ಡಿವಾನ್ ಕಾನ್ವೆ ಶತಕ ವಂಚಿತರಾದರು.
ಇನ್ನುಳಿದಂತೆ ಶಿವಮ್ ದುಬೆ 17 ಎಸೆತಗಳಲ್ಲಿ 28 ರನ್, ಮೊಯಿನ್ ಅಲಿ 6 ಎಸೆತಗಳಲ್ಲಿ 10 ರನ್, ರವೀಂದ್ರ ಜಡೇಜಾ 10 ಎಸೆತಗಳಲ್ಲಿ 12 ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ 4 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 13 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಪರ ಅರ್ಷ್‌ದೀಪ್ ಸಿಂಗ್, ಸ್ಯಾಮ್ ಕರ್ರನ್, ರಾಹುಲ್ ಚಹರ್ ಹಾಗೂ ಸಿಖಂದರ್ ರಾಜಾ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದರು. ಪ್ರಭ್‌ಸಿಮ್ರಾನ್ ಸಿಂಗ್ 24 ಎಸೆತಗಳಲ್ಲಿ 42 ರನ್ ಗಳಿಸಿದರೆ, ಶಿಖರ್ ಧವನ್ 15 ಎಸೆತಗಳಲ್ಲಿ 28 ರನ್ ಗಳಿಸಿದರು. ಇನ್ನುಳಿದಂತೆ ಅಥರ್ವ ಥೈದೆ 17 ಎಸೆತಗಳಲ್ಲಿ 13 ರನ್, ಸ್ಯಾಮ್ ಕರ್ರನ್ 20 ಎಸೆತಗಳಲ್ಲಿ 29 ರನ್, ಲಿಯಾಮ್ ಲಿವಿಂಗ್‌ಸ್ಟನ್ 24 ಎಸೆತಗಳಲ್ಲಿ 40 ರನ್, ಜಿತೇಶ್ ಶರ್ಮಾ 10 ಎಸೆತಗಳಲ್ಲಿ 21 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಅಬ್ಬರಿಸಿದ ಕಾರಣ ಪಂಜಾಬ್ ಕಿಂಗ್ಸ್ ಗೆಲುವಿನ ಸನಿಹಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ ಗೆಲ್ಲಲು 9 ರನ್‌ಗಳ ಅಗತ್ಯವಿತ್ತು. ಶಾರುಖ್ ಖಾನ್ ಹಾಗೂ ಸಿಕಂದರ್ ರಾಜಾ ಕಣದಲ್ಲಿದ್ದರು. ಮಹೀಶ್ ಪತಿರಾಣಾ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ 1, ಎರಡನೇ ಎಸೆತದಲ್ಲಿ 1 ರನ್, ಮೂರನೇ ಎಸೆತದಲ್ಲಿ ನೋ ರನ್, ಎರಡನೇ ಎಸೆತದಲ್ಲಿ 2 ರನ್ ಹಾಗೂ ಐದನೇ ಎಸೆತದಲ್ಲಿ 2 ರನ್ ಹರಿದುಬಂತು. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್‌ಗಳ ಅಗತ್ಯವಿತ್ತು.
ಈ ಸಂದರ್ಭದಲ್ಲಿ ಸೂಪರ್ ಓವರ್ ನಿರೀಕ್ಷೆ ಸಹ ಇತ್ತು. ಆದರೆ ಸಿಖಂದರ್ ರಾಜಾ ಬ್ಯಾಟ್‌ಗೆ ತಾಕಿದ ಚೆಂಡು ನಿಧಾನವಾಗಿ ಬೌಂಡರಿಯತ್ತ ಸಾಗಿತ್ತು. ಚೆಂಡು ಬೌಂಡರಿ ಮುಟ್ಟದಿದ್ದರೂ ಫೀಲ್ಡರ್ ಇರದಿದ್ದ ಕಾರಣ ಸಿಖಂದರ್ ರಾಜಾ ಹಾಗೂ ಶಾರುಖ್ ಖಾನ್ ಮೂರು ರನ್‌ಗಳನ್ನು ಓಡಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ರೋಚಕವಾಗಿ ಜಯ ಸಾಧಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಮಹೀಶ್ ಪತಿರಾಣಾ 1 ವಿಕೆಟ್ ಪಡೆದರು.