ಸೋಮವಾರ, ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಕಲೆ ಹಾಕಿದೆ. 215 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಆರಂಭಿಸಿದ 3 ಎಸೆತಗಳ ನಂತರ ಮಳೆ ಸುರಿದು ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಭಾನುವಾರ (ಮೇ 28) ಮಳೆ ಬಂದ ಕಾರಣ ಮೀಸಲು ದಿನವಾದ ಇಂದು (ಸೋಮವಾರ, ಮೇ 29) ಫೈನಲ್ ಪಂದ್ಯವನ್ನು ನಿಗದಿಗೊಳಿಸಲಾಗಿತ್ತು. ಆದರೆ, ಮೀಸಲು ದಿನವೂ ಎರಡನೇ ಇನ್ನಿಂಗ್ಸ್ ವೇಳೆ ಮಳೆ ಸುರಿದು ಆಟಕ್ಕೆ ಅಡ್ಡಿಯುಂಟು ಮಾಡಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯೆಂದರೆ, ಸದ್ಯ ಮಳೆ ನಿಂತಿದ್ದು, ಪಿಚ್ ಮೇಲೆ ಹಾಕಲಾಗಿದ್ದ ಕವರ್‌ಗಳನ್ನು ತೆಗೆಯಲಾಗಿದೆ. ಮೈದಾನದ ತೇವಾಂಶವನ್ನು ಒಣಗಿಸಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಒಂದು ವೇಳೆ ಓವರ್‌ಗಳನ್ನು ಕಡಿತಗೊಳಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುರಿಯನ್ನು ಮರು ನಿಗದಿಪಡಿಸಲಾಗುತ್ತದೆ. 15 ಓವರ್‌ಗಳಿಗೆ ಇಳಿಸಿದರೆ, 171 ರನ್‌ಗಳ ಗುರಿ ನೀಡಲಾಗುತ್ತದೆ. ಹಾಗಾದರೆ, ಸಿಎಸ್‌ಕೆ ಉಳಿದ 14.3 ಓವರ್‌ಗಳಲ್ಲಿ 167 ರನ್ ಗಳಿಸಬೇಕಾಗುತ್ತದೆ.

ಇನ್ನು 10 ಓವರ್‌ನ ಆಟ ನಡೆದರೆ 123 ರನ್ ಗಳಿಸಬೇಕಾಗುತ್ತದೆ. ಅಂದರೆ ಉಳಿದ 9.3 ಓವರ್‌ಗಳಲ್ಲಿ 119 ರನ್‌ಗಳ ಗುರಿ ನೀಡಲಾಗುತ್ತದೆ. ಸಮಯ ಮೀರಿ ಕೇವಲ 5 ಓವರ್‌ಗಳ ಆಟ ನಡೆದರೆ 66 ರನ್‌ಗಳ ಪರಿಷ್ಕೃತ ಗುರಿ ನೀಡಲಾಗುತ್ತದೆ. ಅಂದರೆ ಉಳಿದ 4.3 ಓವರ್‌ಗಳಲ್ಲಿ 62 ರನ್ ಗಳಿಸಬೇಕಾಗುತ್ತದೆ.
ಮೈದಾನದ ಸಿಬ್ಬಂದಿಗಳು ತೇವಾಂಶ ಪ್ರದೇಶಗಳ ಮೇಲೆ ಮರಳನ್ನು ಸಿಂಪಡಿಸುತ್ತಿರುವುದರಲ್ಲಿ ಕಾರ್ಯನಿರತರಾಗಿದ್ದಾರೆ. ಸೂಪರ್ ಸಾಪರ್ಸ್ ಕೂಡ ಓಡಾಡುತ್ತಿದೆ. ಪಂದ್ಯದ ಅಂಪೈರ್‌ಗಳು ಚರ್ಚೆ ಪಿಚ್‌ಗೆ ಬಂದು ಪರಿಶೀಲನೆ ನಡೆಸಿದರು.
ಬಳಿಕ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಮತ್ತು ಅಂಪೈರ್‌ಗಳೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದರು. ಮುಂದಿನ ತಪಾಸಣೆಯನ್ನು ಭಾರತೀಯ ಕಾಲಮಾನ ರಾತ್ರಿ 11.30 ಗಂಟೆಗೆ ಮಾಡಲಾಗುತ್ತದೆ
ಶುಭ್ಮನ್ ಗಿಲ್ 20 ಎಸೆತಗಳಲ್ಲಿ 7 ಬೌಂಡರಿ ಸಮೇತ 39 ರನ್ ಗಳಿಸಿ ಔಟಾದರೆ, ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ನಂತರ ಬಂದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಮೂಲಕ 96 ರನ್ ಬಾರಿಸಿ ಮಿಂಚಿದರು. ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 21 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೀಶ್ ಪತಿರಾನ ಅವರು ತಮ್ಮ ಕೋಟಾದ ನಾಲ್ಕು ಓವರ್‌ಗಳಲ್ಲಿ 44 ರನ್ ನೀಡಿ ಎರಡು ವಿಕೆಟ್ ಪಡೆದರು. ಸ್ಪಿನ್ನರ್ ರವೀಂದ್ರ ಜಡೇಜಾ ನಾಲ್ಕು ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಪಡದರೆ, ದೀಪಕ್ ಚಹಾರ್ ನಾಲ್ಕು ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಇದೇ ವೇಳೆ ತುಷಾರ್ ದೇಶಪಾಂಡೆ ತಮ್ಮ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಂತ ದುಬಾರಿ ಬೌಲರ್ ಎನಿಸಿದರು.