ಐಪಿಎಲ್ 2023: ಗಾಯಗೊಂಡು ಹೊರಬಿದ್ದ ಪ್ರಸಿದ್ಧ್ ಕೃಷ್ಣಗೆ ಬದಲಿ ಆಟಗಾರನನ್ನು ಹೆಸರಿಸಿದ ರಾಜಸ್ಥಾನ್ ರಾಯಲ್ಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಮಾರ್ಚ್ 31ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನು ಈ ಬಾರಿಯ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಗಾಯದ ಕಾರಣದಿಂದಾಗಿ ಸಂಪೂರ್ಣವಾಗಿ ಅಲಭ್ಯವಾಗುವುದು ಖಚಿತಚಾಗಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡ ಪ್ರಸಿದ್ಧ್ ಕೃಷ್ಣಗೆ ಬದಲಿ ಆಟಗಾರನನ್ನು ಹೆಸರಿಸಿದೆ.
ಸಂದೀಪ್ ಶರ್ಮಾ ಬದಲಿ ಆಟಗಾರ: ಇನ್ನು ಪ್ರಸಿದ್ಧ್ ಕೃಷ್ಣ ಗಾಯಗೊಂಡು ಅಲಭ್ಯವಾಗಿರುವುದು ಮತ್ತೋರ್ವ ವೇಗದ ಬೌಲರ್ ಸಂದೀಪ್ ಶರ್ಮಾಗೆ ಮತ್ತೊಂದು ಅವಕಾಶಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಸಂದೀಪ್ ಶರ್ಮಾ ಅವರನ್ನು ಯಾವುದೇ ಫ್ರಾಂಚೈಸಿ ಕೊಂಡುಕೊಳ್ಳದ ಕಾರಣ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ಈಗ ಬದಲಿ ಆಟಗಾರನಾಗಿ ಸಂದೀಪ್ ಶರ್ಮಾ ಮತ್ತೆ ಐಪಿಎಲ್‌ನಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ.
ಅನುಭವಿ ಸಂದೀಪ್ ಶರ್ಮಾ ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 104 ಪಂದ್ಯಗಳನ್ನು ಆಡಿರುವ ಸಂದೀಪ್ ಶರ್ಮಾ 114 ವಿಕೆಟ್‌ಗಳನ್ನು ಗಳಿಸಿದ್ದಾರೆ. 29ರ ಹರೆಯದ ಈ ವೇಗಿ ಭಾರತದ ಪರವಾಗಿ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇನ್ನು ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ 2022ರ ಆಗಸ್ಟ್‌ನಲ್ಲಿ ಜಿಂಬಾಬ್ವೆ ಪ್ರವಾಸದ ಸಂದರ್ಭದಲ್ಲಿ ಬೆನ್ನು ನೋವಿಗೆ ಒಳಗಾಗಿದ್ದು ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಪ್ರಸಿದ್ಧ್ 19 ವಿಕೆಟ್‌ಗಳನ್ನು ಕಬಳಿಸಿ ತಂಡದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದರು. ಸಂಜು ಸ್ಯಾಮ್ಸನ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡು ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನು ಐಪಿಎಲ್‌ನ ಮತ್ತೊಂದು ತಂಡವಾಗಿರುವ ಪಂಜಾಬ್ ಕಿಂಗ್ಸ್ ತಂಡ ಇಂಗ್ಲೆಂಡ್‌ನ ಆಟಗಾರ ಜಾನಿ ಬೈರ್‌ಸ್ಟೋವ್ ಅವರು ಈ ಬಾರಿಯ ಐಪಿಎಲ್ ಟೂರ್ನಿಗೆ ಅಲಭ್ಯವಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ಕಳೆದ ವರ್ಷದ ಸೆಪ್ಟರೆಂಬರ್‌ನಲ್ಲಿ ತೀವ್ರ ಗಾಲಿನ ಗಾಯಕ್ಕೆ ತುತ್ತಾದ ಜಾನು ಬೈರ್‌ಸ್ಟೋವ್ ಇನ್ನು ಕೂಡ ಚೇತರಿಕೆ ಕಂಡಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಜಾನಿ ಬೈರ್‌ಸ್ಟೋವ್ ಹೊರಗುಳಿಯಲಿದ್ದಾರೆ. ಬೈರ್‌ಸ್ಟೋವ್‌ಗೆ ಬದಲಿ ಆಟಗಾರನನ್ನು ಪಂಜಾಬ್ ಕಿಂಗ್ಸ್ ಇನ್ನಷ್ಟೇ ಘೋಷಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications