CSK vs RR: ರಾಜಸ್ಥಾನ್ ವಿರುದ್ಧ ಮತ್ತೆ ಸೋತ ಸಿಎಸ್‌ಕೆ; ಹೋಯಿತು ನಂಬರ್ 1 ಪಟ್ಟ

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 37ನೇ ಪಂದ್ಯ ಇಂದು ( ಏಪ್ರಿಲ್ 27 ) ಜೈಪುರದ ಸಾವೈ ಮಾನ್‌ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡು, ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿ, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 203 ರನ್‌ಗಳ ಗುರಿಯನ್ನು ನೀಡಿತ್ತು.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿದ್ದು 32 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮೊದಲಿಗೆ ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಈ ಪಂದ್ಯದಲ್ಲಿ ಸೇಡನ್ನು ತೀರಿಸಿಕೊಳ್ಳುವ ಯೋಜನೆಯಲ್ಲಿದ್ದ ಸಿಎಸ್‌ಕೆ ಇದೀಗ ಮತ್ತೊಮ್ಮೆ ರಾಜಸ್ಥಾನ್ ವಿರುದ್ಧ ಮಕಾಡೆ ಮಲಗಿದೆ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್:
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಜೋಸ್ ಬಟ್ಲರ್ 21 ಎಸೆತಗಳಲ್ಲಿ 27 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 43 ಎಸೆತಗಳಲ್ಲಿ 77 ರನ್ ಬಾರಿಸಿ ಅಬ್ಬರಿಸಿದರು. ಯಶಸ್ವಿ ಜೈಸ್ವಾಲ್ ಅವರ ಈ ಸ್ಪೋಟಕ ಆಟದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹ ಸೇರಿದ್ದವು. ಇನ್ನುಳಿದಂತೆ ತಂಡದ ನಾಯಕ ಸಂಜು ಸ್ಯಾಮ್ಸನ್ 17 ಎಸೆತಕ್ಕೆ 17 ರನ್, ಶಿಮ್ರಾನ್ ಹೆಟ್ಮಾಯೆರ್ 10 ಎಸೆತಗಳಲ್ಲಿ 8 ರನ್ ಗಳಿಸಿ ರನ್ ವೇಗ ಕುಸಿಯುವಂತೆ ಮಾಡಿದರು.
ಅಂತಿಮ ಹಂತದಲ್ಲಿ 15 ಎಸೆತಗಳಲ್ಲಿ 34 ರನ್ ಚಚ್ಚಿದ ಧ್ರುವ್ ಜುರೆಲ್ ತಂಡ ಪೈಪೋಟಿಯುತ ಮೊತ್ತ ಕಲೆಹಾಕುವ ಹಾಗೆ ಮಾಡಿದರು. ದೇವದತ್ ಪಡಿಕ್ಕಲ್ 13 ಎಸೆತಗಳಲ್ಲಿ ಅಜೇಯ 27 ರನ್ ಹಾಗೂ ರವಿಚಂದ್ರನ್ ಅಶ್ವಿನ್ 1 ಎಸೆತದಲ್ಲಿ ಅಜೇಯ 1 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ ಎರಡು ವಿಕೆಟ್, ಮಹೀಶ್ ತೀಕ್ಷಣ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್:
ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾಗಿ ರುತುರಾಜ್ ಗಾಯಕ್ವಾಡ್ ಹಾಗೂ ಡಿವಾನ್ ಕಾನ್ವೆ ಕಣಕ್ಕಿಳಿದರು. ಕಾನ್ವೆ 16 ಎಸೆತಗಳಲ್ಲಿ 8 ರನ್ ಕಲೆಹಾಕಿ ನೀರಸ ಬ್ಯಾಟಿಂಗ್ ಮಾಡಿದರೆ, ರುತುರಾಜ್ ಗಾಯಕ್ವಾಡ್ 29 ಎಸೆತಗಳಲ್ಲಿ 47 ರನ್ ಗಳಿಸಿದರು. ಪವರ್‌ಪ್ಲೇ ಕೊನೆಯ ಎಸೆತದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಮೊತ್ತ ಕಲೆಹಾಕಲಾಗದೇ ಕೆಟ್ಟ ಆರಂಭ ಪಡೆದುಕೊಂಡಿತ್ತು. ಆ ಬಳಿಕ ರುತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ಅಬ್ಬರದಿಂದ ಚೆನ್ನೈ ಸೂಪರ್ ಕಿಂಗ್ಸ್ ಚೇತರಿಸಿಕೊಂಡಿತು.
ಬಳಿಕ ಕಣಕ್ಕಿಳಿದ ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ 15 ರನ್, ಅಂಬಾಟಿ ರಾಯುಡು ಡಕ್ ಔಟ್, ಮೊಯಿನ್ ಅಲಿ 12 ಎಸೆತಗಳಲ್ಲಿ 23, ಶಿವಂ ದುಬೆ 33 ಎಸೆತಗಳಲ್ಲಿ 52 ಹಾಗೂ ರವೀಂದ್ರ ಜಡೇಜಾ 15 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ಸನಿಹಕ್ಕೂ ಸಹ ಕೊಂಡೊಯ್ಯಲಾಗಲಿಲ್ಲ.
ಇನ್ನು ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಭಾಗಕ್ಕೆ ಗೆಲುವಿನ ಕ್ರೆಡಿಟ್ ಹೆಚ್ಚಾಗಿ ಸೇರಬೇಕು ಎನ್ನಬಹುದು. ಅದರಲ್ಲಿಯೂ ಇಂದಿನ ಪಂದ್ಯದಲ್ಲಿ ಬೌಲ್ಟ್ ಬದಲಾಗಿ ಕಣಕ್ಕಿಳಿದ ಜಂಪಾ ಸಿಎಸ್‌ಕೆ ತಂಡದ ಮೂವರು ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ರುತುರಾಜ್ ಗಾಯಕ್ವಾಡ್, ಡಿವಾನ್ ಕಾನ್ವೆ ಹಾಗೂ ಮೊಯಿನ್ ಅಲಿ ಅವರ ವಿಕೆಟ್‌ಗಳನ್ನು ಪಡೆದರು. ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಹಾಗೂ ಕುಲ್‌ದೀಪ್ ಯಾದವ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications