ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದು ಅಂಕಪಟ್ಟಿಯಲ್ಲಿಯೂ ಉತ್ತಮ ಸ್ಥಾನದಲ್ಲಿದೆ. ತಂಡದ ಆಟಗಾರರಿಂದ ಸಾಂಘಿಕ ಪ್ರದರ್ಶನ ಬರುತ್ತಿರುವುದು ತಂಡಕ್ಕಿರುವ ದೊಡ್ಡ ಬಲ. ಆದರೆ ಕಳೆದ ಬಾರಿಯಂತೆ ಈ ಬಾರಿ ನಾಯಕ ಹಾರ್ದಿಕ್ ಪಾಂಡ್ಯ ಅವರಿಂದ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಬಾರದಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಈ ಹಂತದಲ್ಲಿ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಮಾತನಾಡಿದ್ದು ತಂಡದಲ್ಲಿ ತನಗೆ ನೀಡಿರುವ ಜವಾಬ್ಧಾರಿಯ ಬಗ್ಗೆ ಮಾತನಾಡಿದ್ದಾರೆ. ತಂಡದ ಕೋಚ್ ಆಶಿಶ್ ನೆಹ್ರಾ ತಮ್ಮಲ್ಲಿ ಆಲ್‌ರೌಂಡರ್ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು ಎಂಬುದನ್ನು ತಿಳಿಸಿರುವುದಾಗಿ ರಶೀದ್ ಖಾನ್ ಬಿಚ್ಚಿಟ್ಟಿದ್ದು ಬ್ಯಾಟಿಂಗ್‌ನಲ್ಲಿ ತಾನು ಜವಾಬ್ಧಾರಿ ವಹಿಸಿಕೊಳ್ಳಲು ಸಜ್ಜಾಗಿದ್ದೇನೆ ಎಂದಿದ್ದಾರೆ.

ಗುಜರಾತ್ ಟೈಟನ್ಸ್ ತಂಡ ಕಳೆದ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐಪಿಎಲ್‌ಗೆ ಸೇರ್ಪೊಡೆಯಾದ ತಕ್ಷಣವೇ ಆಶಿಶ್ ನೆಹ್ರಾ ತಂಡದ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದರು. ಕೋಚ್ ಆಗಿ ಆಶಿಶ್ ನೆಹ್ರಾ ಅವರ ಕಾರ್ಯಶೈಲಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಹೊಂದಾಣಿಗೆ ಕೂಡ ತಂಡದ ಯಶಸ್ಸಿನಲ್ಲಿ ಪಾತ್ರವಹಿಸಿತ್ತು. ಇದೀಗ ರಶೀದ್ ಖಾನ್ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಜೊತೆಗೆ ಕರ್ತವ್ಯ ನಿರ್ವಹಿಸುವ ವಿಚಾರವಾಗಿ ಮಾತನಾಡಿದ್ದಾರೆ.
"ಬ್ಯಾಟಿಂಗ್ ಕೋಚ್ ಗ್ಯಾರಿ ಕಿರ್ಸ್ಟನ್ ಅವರೊಂದಿಗಿನ ಅನುಭವ ಅದ್ಭುತವಾಗಿದೆ. ಅವರು ನನಗೆ ಬ್ಯಾಟಿಂಗ್‌ನಲ್ಲಿ ಸಲಹೆಗಳನ್ನು ನೀಡುತ್ತಿದ್ದಾರೆ. ಆಶಿಶ್ ನೆಹ್ರಾ ಅವರು ನಾನು ತಂಡದಲ್ಲಿ ಆಲ್‌ರೌಂಡರ್ ಆಗಿರುತ್ತೇನೆಂದು ತಿಳಿಸಿದ್ದು ಬ್ಯಾಟಿಂಗ್‌ನಲ್ಲಿಯೂ ಅವಕಾಶಗಳು ದೊರೆಯಲಿದೆ" ಎಂದಿದ್ದಾರೆ ರಶೀದ್ ಖಾನ್.
ಈವರೆಗಿನ ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಜಿಟಿ ಸೋಲು ಅನುಭವಿಸಿತ್ತು. ಈ ಎರಡು ಪಂದ್ಯಗಳಲ್ಲಿ ಅನುಭವಿಸಿರುವ ಸೋಲು ತಂಡಕ್ಕೆ ಹಿನ್ನಡೆಯುಂಟಿ ಮಾಡದು ಎಂದಿದ್ದಾರೆ ರಶೀದ್ ಖಾನ್. ಸೋಲು ಕಂಡ ಪಂದ್ಯಗಳಲ್ಲಿ ಎಲ್ಲಿ ತಪ್ಪು ಮಾಡಲಾಯಿದು ಎಂಬುದನ್ನು ಅರಿತುಕೊಂಡಿದ್ದು ಅವುಗಳನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
"ನಾವು ಅಂಕಪಟ್ಟಿಯಲ್ಲಿ ಮೂರು-ನಾಲ್ಕನೇ ಸ್ಥಾನದಲ್ಲಿದ್ದು ಉತ್ತಮ ಸ್ಥಿತಿಯಲ್ಲಿದ್ದೇವೆ. ಎರಡು ಪಂದ್ಯಗಳಲ್ಲಿ ನಾವು ಗೆಲ್ಲಬಹುದಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಕಳೆದ ವರ್ಷ ನಾವು ನ್ಮಮ ಕೈಯ್ಯಲ್ಲಿ ಇಲ್ಲದ ಪಂದ್ಯಗಳನ್ನು ಕೂಡ ಗೆದ್ದಿದ್ದೆವು. ಇದು ಟಿ20 ಪಂದ್ಯ ಇದರಲ್ಲಿ ನೀವು ಇಂಥವುಗಳಿಗೆ ಮಾನಸಿಕವಾಗಿ ಸಿದ್ಧವಾಗಿರಬೇಕು. ಆ ಎರಡು ಪಂದ್ಯಗಳು ಮುಂದಿನ ನಮ್ಮ ಪಂದ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ. ಸೋತ ಪಂದ್ಯಗಳಲ್ಲಿಯೂ ನಾವು ಉತ್ತಮವಾದ ಕ್ರಿಕೆಟ್ ಆಡಿದ್ದೇವೆ. ಆದರೆ ನಾವು ತಪ್ಪೆಸಗಿದೆವು. ಅದರಿಂದ ಪಾಠ ಕಲಿತುಕೊಂಡಿದ್ದು ಸರಿಪಡಿಸಿಕೊಳ್ಳುತ್ತೇವೆ" ಎಂದಿದ್ದಾರೆ ರಶೀದ್ ಖಾನ್.