RCB vs PBKS: ಮಿಂಚಿದ ಕೊಹ್ಲಿ, ಫಾಫ್, ಸಿರಾಜ್; ಪಂಜಾಬ್ ಸೋಲಿಸಿ ಅಂಕಪಟ್ಟಿಯಲ್ಲಿ ಏರಿಕೆ ಕಂಡ ಆರ್ಸಿಬಿ

ಇಂದು ( ಏಪ್ರಿಲ್ 20 ) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಷಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 24 ರನ್ಗಳ ಅಂತರದ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಇಬ್ಬರ ಆಕರ್ಷಕ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿದ್ದು, ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 175 ರನ್ಗಳ ಗುರಿಯನ್ನು ನೀಡಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಪಂಜಾಬ್ ಕಿಂಗ್ಸ್ 18.2 ಓವರ್ಗಳಲ್ಲಿ 150 ರನ್ಗಳಿಗೆ ಆಲ್ಔಟ್ ಆಗಿ ಸೋಲನ್ನು ಕಂಡಿದೆ. ಪಂಜಾಬ್ ಕಿಂಗ್ಸ್ ತಂಡದ ಪರ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಜಿತೇಶ್ ಶರ್ಮಾ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್ಮನ್ ಕೂಡ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ನೀಡಲೇ ಇಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರರಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು. ಗಾಯದ ಸಮಸ್ಯೆಗೆ ಒಳಗಾಗಿರುವ ಫಾಫ್ ಡು ಪ್ಲೆಸಿಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದಾರೆ. 16 ಓವರ್ಗಳವರೆಗೆ ವಿಕೆಟ್ ಕಳೆದುಕೊಳ್ಳದೇ 137 ರನ್ಗಳ ಜತೆಯಾಟವನ್ನು ಈ ಜೋಡಿ ಆಡಿದೆ. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 59 ರನ್ ಗಳಿಸಿದರೆ, ಫಾಫ್ ಡು ಪ್ಲೆಸಿಸ್ 56 ಎಸೆತಗಳಲ್ಲಿ 84 ರನ್ ಗಳಿಸಿದರು. ಇನ್ನುಳಿದಂತೆ ಗ್ಲೆನ್ ಮ್ಯಾಕ್ಸ್ವೆಲ್ ಗೋಲ್ಡನ್ ಡಕ್ಔಟ್ ಆದರೆ, ದಿನೇಶ್ ಕಾರ್ತಿಕ್ ಕೇವಲ 7 ರನ್, ಮಹಿಪಾಲ್ ಲೊಮ್ರಾರ್ ಅಜೇಯ 7 ರನ್ ಹಾಗೂ ಶಹ್ಬಾಜ್ ಅಹ್ಮದ್ ಅಜೇಯ 5 ರನ್ ಕಲೆಹಾಕಿದರು. ಪಂಜಾಬ್ ಕಿಂಗ್ಸ್ ಪರ ಹರ್ಪ್ರೀತ್ ಬ್ರಾರ್ 2 ವಿಕೆಟ್ ಪಡೆದರೆ, ನಾಥನ್ ಎಲ್ಲಿಸ್ ಹಾಗೂ ಅರ್ಷ್ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ಪರ ಅಥರ್ವ ಥೈದೆ 2, ಪ್ರಭ್ಸಿಮ್ರನ್ ಸಿಂಗ್ 46, ಮ್ಯಾಥ್ಯೂ ಶಾರ್ಟ್ 8, ಲಿಯಾಮ್ ಲಿವಿಂಗ್ಸ್ಟಾನ್ 2, ಹರ್ಪ್ರೀತ್ ಸಿಂಗ್ ಭಾಟಿಯಾ 13, ಸ್ಯಾಮ್ ಕರನ್ 10, ಜಿತೇಶ್ ಶರ್ಮಾ 41, ಶಾರುಖ್ ಖಾನ್ 7, ಹರ್ಪ್ರೀತ್ ಬ್ರಾರ್ 13, ನಾಥನ್ ಎಲ್ಲಿಸ್ 1 ಹಾಗೂ ಅರ್ಷ್ದೀಪ್ ಸಿಂಗ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ವನಿಂದು ಹಸರಂಗ 2 ವಿಕೆಟ್ ಪಡೆದರು ಹಾಗೂ ವೇಯ್ನ್ ಪಾರ್ನೆಲ್ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ. 6 ಪಂದ್ಯಗಳನ್ನಾಡಿರುವ ಆರ್ಸಿಬಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications