
ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ಮುಕ್ತಾಯದ ಹಂತಕ್ಕೆ ತಲುಪಿದ್ದು, ಎರಡನೇ ಕ್ವಾಲಿಫಯರ್ ಪಂದ್ಯಗಳು ಬಾಕಿ ಉಳಿದುಕೊಂಡಿವೆ.
ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ನಾಳೆ ( ಮೇ 26 ) ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆ ಸೆಣಸಾಡಲಿವೆ.
ಹೌದು, ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶ ಮಾಡಿದೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಇತಿಹಾಸದಲ್ಲಿ ಹತ್ತನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
ಇನ್ನು ಗುಜರಾತ್ ಟೈಟನ್ಸ್ ವಿರುದ್ಧದ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಮಣಿದು 20 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲ್‌ಔಟ್ ಆಗಿ 15 ರನ್‌ಗಳ ಅಂತರದ ಸೋಲನ್ನು ಅನುಭವಿಸಿತು.
ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರುತುರಾಜ್ ಗಾಯಕ್ವಾಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ತಂಡದ ಗೆಲುವಿಗೆ ಕಾರಣರಾದ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ 'ಅಪ್ ಸ್ಟಾಕ್ಸ್ ಮೋಸ್ಟ್ ವ್ಯಾಲ್ಯುಯಬಲ್ ಅಸೆಟ್ ಆಫ್ ದ ಮ್ಯಾಚ್' ಪ್ರಶಸ್ತಿಗೆ ಭಾಜನರಾದರು.
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 16 ಎಸೆತಗಳನ್ನು ಎದುರಿಸಿ 22 ರನ್ ಕಲೆಹಾಕಿದರು. ಬೌಲಿಂಗ್‌ನಲ್ಲಿ ದಾಸನ್ ಶನಕ ಹಾಗೂ ಡೇವಿಡ್ ಮಿಲ್ಲರ್ ರೀತಿಯ ಸ್ಪೋಟಕ ಆಟಗಾರರ ವಿಕೆಟ್ ಪಡೆದ ರವೀಂದ್ರ ಜಡೇಜಾ 2 ವಿಕೆಟ್‌ಗಳನ್ನು ಪಡೆದು, ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.
ಹೀಗೆ ಅಪ್ ಸ್ಟಾಕ್ಸ್ ಮೋಸ್ಟ್ ವ್ಯಾಲ್ಯುಯಬಲ್ ಅಸೆಟ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪಡೆದ ನಂತರ ಅದರ ಚಿತ್ರವನ್ನು ಟ್ವೀಟ್ ಮಾಡಿದ ಜಡೇಜಾ ನನ್ನ ಬೆಲೆ ಅಪ್‌ಸ್ಟಾಕ್ಸ್‌ಗೆ ಗೊತ್ತಿದೆ, ಆದರೆ ಕೆಲವು ಅಭಿಮಾನಿಗಳಿಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಧೋನಿ ಅಭಿಮಾನಿಗಳನ್ನು ಟ್ರೋಲ್ ಮಾಡಿದರು. ಇದಕ್ಕೆ ಕಾರಣ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಬ್ಯಾಟಿಂಗ್ ನೋಡುವ ಸಲುವಾಗಿ ಜಡೇಜಾ ಔಟ್ ಆಗಲಿ ಎಂದು ಹಲವು ಬಾರಿ ಕೂಗಿದ್ದು.
ಹೌದು, ರವೀಂದ್ರ ಜಡೇಜಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡುವಾಗ ಸ್ಟೇಡಿಯಂನದಲ್ಲಿ ನೆರೆದಿರುವ ಧೋನಿ ಫ್ಯಾನ್ಸ್ ತಮ್ಮ ನೆಚ್ಚಿನ ಆಟಗಾರ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ ಧೋನಿ ಧೋನಿ ಎಂದು ಹಲವಾರು ಪಂದ್ಯಗಳಲ್ಲಿ ಕೂಗಿದ್ದರು. ಅಲ್ಲದೇ ಜಡೇಜಾ ವಿಕೆಟ್ ಬಿದ್ದ ಕೂಡಲೇ ಸಂಭ್ರಮಿಸಿದ್ದರು.
ಇದರ ಬಗ್ಗೆ ಕಳೆದ ಪಂದ್ಯವೊಂದರ ನಂತರ ಸ್ವತಃ ಪ್ರತಿಕ್ರಿಯಿಸಿದ್ದ ರವೀಂದ್ರ ಜಡೇಜಾ ಧೋನಿ ಬ್ಯಾಟಿಂಗ್ ನೋಡಲು ನಾನು ಔಟ್ ಆದದ್ದನ್ನು ಹಲವು ಧೋನಿ ಅಭಿಮಾನಿಗಳು ಸಂಭ್ರಮಿಸುತ್ತಾರೆ ಎಂದು ನೇರವಾಗಿಯೇ ಹೇಳಿದ್ದರು.
ಹೀಗೆ ಜಡೇಜಾ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ಅನೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ನಮ್ಮ ತಂಡದಲ್ಲಿ ಇಂತಹ ಯಾವುದೇ ಅಗೌರವ ನಿಮಗೆ ಆಗುವುದಿಲ್ಲ, ನಮ್ಮ ತಂಡಕ್ಕೆ ಬಂದುಬಿಡಿ ಎಂದು ರಿಪ್ಲೈ ಮಾಡಿದ್ದಾರೆ. 'ಕಮ್ ಟು ಆರ್‌ಸಿಬಿ' ಎಂಬ ಸಾಲನ್ನು ಅನೇಕರು ಬಳಸಿದ್ದಾರೆ. ಸದ್ಯ ಟ್ವಿಟರ್‌ನಲ್ಲಿ ಈ ಕುರಿತ ಟ್ವೀಟ್‌ಗಳು ಹೆಚ್ಚಾಗಿ ಹರಿದಾಡುತ್ತಿದ್ದು, ಚೆನ್ನೈ ಪರ ಎಷ್ಟೇ ಚೆನ್ನಾಗಿ ಆಡಿದ್ರೂ ಬೆಲೆ ಸಿಗದ ಜಡೇಜಾಗೆ ಆರ್‌ಸಿಬಿ ಸೇರುವಂತೆ ಆರ್‌ಸಿಬಿ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.