Vyshak Vijaykumar: ರಜತ್ ಪಾಟಿದಾರ್ ಬದಲಿಗೆ ಈ ಕನ್ನಡಿಗನನ್ನು ಆಯ್ಕೆ ಮಾಡಿದ ಆರ್‌ಸಿಬಿ; ಸಿಗುತ್ತಾ ಚಾನ್ಸ್?
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿನಲ್ಲಿ ಆರ್‌ಸಿಬಿ ತಂಡಕ್ಕೆ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ. ಬ್ಯಾಟರ್ ರಜತ್ ಪಾಟಿದಾರ್ ಮತ್ತು ವೇಗಿ ರೀಸ್ ಟೋಪ್ಲೆ ಅವರು ಗಾಯದ ಕಾರಣದಿಂದಾಗಿ ಆರ್‌ಸಿಬಿ ತಂಡದಿಂದ ಈಗಾಗಲೇ ಹೊರಬಿದ್ದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗಾಯಗೊಂಡು ಪಂದ್ಯಾವಳಿಯಿಂದ ಹೊರಬಿದ್ದ ರೀಸ್ ಟೋಪ್ಲೆ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಉಳಿದ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಇದೇ ವೇಳೆ ಶುಕ್ರವಾರ, ಏಪ್ರಿಲ್ 7ರಂದು ಆರ್‌ಸಿಬಿ ತಂಡ ಇನ್ನೊಬ್ಬ ಹೊರಬಿದ್ದ ಆಟಗಾರ ರಜತ್ ಪಾಟಿದಾರ್ ಬದಲಿಗೆ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಅವರನ್ನು 2023ರ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಆಯ್ಕೆ ಮಾಡಿದೆ.
ರಜತ್ ಪಾಟಿದಾರ್ ಅವರು ಹಿಮ್ಮಡಿ ಗಾಯದ ಕಾರಣ ಆರ್‌ಸಿಬಿ ತಂಡದ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಅವರು ಇನ್ನೂ ಚೇತರಿಸಿಕೊಂಡಿಲ್ಲ ಮತ್ತು 16ನೇ ಐಪಿಎಲ್ ಆವೃತ್ತಿಯ ಪಂದ್ಯಾವಳಿಯಿಂದ ಹೊರಗುಳಿದರು.
ರಜತ್ ಪಾಟಿದಾರ್ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ವೈಶಾಕ್ ವಿಜಯ್ ಕುಮಾರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೈಶಾಕ್ ಈವರೆಗೆ 14 ಟಿ20 ಪಂದ್ಯಗಳನ್ನು ಆಡಿದ್ದು, 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ 20 ಲಕ್ಷ ರೂ.ಗಳ ಒಪ್ಪಂದದೊಂದಿಗೆ ತವರಿನ ಆರ್‌ಸಿಬಿ ತಂಡ ಸೇರಿದ್ದಾರೆ.

ಇದಕ್ಕೂ ಮೊದಲು ಆಲ್‌ರೌಂಡರ್ ವಿಲ್ ಜಾಕ್ಸ್ ಗಾಯದ ಕಾರಣ ಹೊರಬಿದ್ದ ನಂತರ, ನ್ಯೂಜಿಲೆಂಡ್‌ನ ಮೈಕಲ್ ಬ್ರೆಸ್‌ವೆಲ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿತ್ತು. ಇನ್ನು ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಗಾಯದಿಂದ ಲೀಗ್‌ನ ಅರ್ಧಭಾಗ ತಪ್ಪಿಸಿಕೊಳ್ಳಲಿದ್ದರೆ, ವನಿಂದು ಹಸರಂಗ ತಮ್ಮ ರಾಷ್ಟ್ರೀಯ ತಂಡದ ಪರ ಆಡುತ್ತಿರುವುದರಿಂದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಗಮನಾರ್ಹವಾಗಿ, ಆರ್‌ಸಿಬಿ ತಂಡದ ವಿದೇಶಿ ಆಟಗಾರ ಶ್ರೀಲಂಕಾದ ವನಿಂದು ಹಸರಂಗ ಅವರು ಏಪ್ರಿಲ್ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಆಡಿಸಬೇಕೆ, ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ವೇಗಿ ಜೋಶ್ ಹೇಜಲ್‌ವುಡ್ ಅವರು ಏಪ್ರಿಲ್ 14ರ ನಂತರ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪ್ರಸಕ್ತ 2023ರ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿತ್ತು. ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ತಮ್ಮ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‌ಗಳ ಹೀನಾಯ ಸೋಲು ಕಂಡಿದೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ತನ್ನ ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇದು ಸೋಮವಾರ, ಏಪ್ರಿಲ್ 10ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications