
ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಜರುಗುತ್ತಿದ್ದು, ನಿನ್ನೆ ( ಮೇ 3 ) ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಲೀಗ್ ಹಂತದ 46ನೇ ಪಂದ್ಯ ಜರುಗಿತು.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಗುರಿಯನ್ನು ನೀಡಿತ್ತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅಬ್ಬರದ ಆಟ ಮತ್ತು ತಿಲಕ್ ವರ್ಮಾ ಕೊನೆ ಹಂತದಲ್ಲಿ ಸಾಲು ಸಾಲು ಬೌಂಡರಿಗಳನ್ನು ಹರಿಸಿದ ಕಾರಣ ಗೆದ್ದು ಬೀಗಿತು. ಮುಂಬೈ ಇಂಡಿಯನ್ಸ್ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ 6 ವಿಕೆಟ್‌ಗಳ ಗೆಲುವನ್ನು ಕಂಡಿತು.
ಹೀಗೆ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆಲುವು ಸಾಧಿಸುವಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಿದ ತಂಡದ ವಿವಿಧ ಆಟಗಾರರ ಕೊಡುಗೆ ಇದ್ದರೆ, ನಾಯಕ ರೋಹಿತ್ ಶರ್ಮಾ ಕೊಡುಗೆ ಮಾತ್ರ ಶೂನ್ಯ. 3 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಯಾವುದೇ ರನ್ ಗಳಿಸದೇ ರಿಷಿ ಧವನ್ ಎಸೆತದಲ್ಲಿ ಮ್ಯಾಥ್ಯೂ ಶಾರ್ಟ್‌ಗೆ ಕ್ಯಾಚ್ ನೀಡಿ ಡಕ್ ಔಟ್ ಆದರು.
ಹೀಗೆ ಡಕ್ ಔಟ್ ಆದ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಪಟ್ಟಿಯಲ್ಲಿ ನಂಬರ್ ಒನ್ ಎನಿಸಿಕೊಂಡಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆದ ನಾಯಕ ಎಂಬ ಕೆಟ್ಟ ದಾಖಲೆಯಲ್ಲಿಯೂ ಸಹ ಇದೀಗ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಾಯಕರಾಗಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಪಟ್ಟಿಯಲ್ಲಿ 10 ಬಾರಿ ಡಕ್ ಔಟ್ ಆಗಿದ್ದ ಗೌತಮ್ ಗಂಭೀರ್ ಅಗ್ರಸ್ಥಾನದಲ್ಲಿದ್ದರು. ಇದೀಗ ರೋಹಿತ್ ಶರ್ಮಾ ಸಹ 10 ಬಾರಿ ಡಕ್ ಔಟ್ ಆಗುವ ಮೂಲಕ ಈ ಕೆಟ್ಟ ದಾಖಲೆಯಲ್ಲಿ ಅಗ್ರಸ್ಥಾನವನ್ನು ಗೌತಮ್ ಗಂಭೀರ್ ಜತೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಐಪಿಎಲ್‌ನಲ್ಲಿ ನಾಯಕನಾಗಿ ಅತಿಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಟಾಪ್ 4 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ರೋಹಿತ್ ಶರ್ಮಾ - 10 ಬಾರಿ
2. ಗೌತಮ್ ಗಂಭೀರ್ - 10 ಬಾರಿ
3. ಆಡಮ್ ಗಿಲ್‌ಕ್ರಿಸ್ಟ್ - 7 ಬಾರಿ
4. ಶೇನ್ ವಾರ್ನ್ - 7 ಬಾರಿ
15 ಬಾರಿ ಡಕ್ಔಟ್ ಆದ ಆಟಗಾರರು: ಇನ್ನು ನಾಯಕನಾಗಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಕೆಟ್ಟ ದಾಖಲೆ ಮಾಡಿರುವ ರೋಹಿತ್ ಶರ್ಮಾ ಆಟಗಾರರಾಗಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಪಟ್ಟಿಯಲ್ಲಿಯೂ ಸಹ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..
1. ಸುನಿಲ್ ನರೇನ್ - 15 ಬಾರಿ
2. ಮನ್‌ದೀಪ್ ಸಿಂಗ್ - 15 ಬಾರಿ
3. ದಿನೇಶ್ ಕಾರ್ತಿಕ್ -15 ಬಾರಿ
4. ರೋಹಿತ್ ಶರ್ಮಾ - 15 ಬಾರಿ